More

    ದಾಹ ತಣಿಸುವ ಎಳನೀರು ಕೊರತೆ : ಬೇಡಿಕೆಯಷ್ಟಿಲ್ಲದ ಪೂರೈಕೆ

    -ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಬೇಸಿಗೆಯ ರಣಬಿಸಿಲಿನಿಂದ ರಕ್ಷಣೆ ಪಡೆಯಲು ಜನರು ತಂಪು ಪಾನೀಯ, ಹಣ್ಣುಗಳ ಜೂಸ್, ಎಳನೀರಿಗೆ ಮೊರೆಹೋಗುತ್ತಿದ್ದು, ಇತ್ತ ಬೇಡಿಕೆಯಷ್ಟು ಎಳನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಎಳನೀರು ಪ್ರಿಯರು ಹಾಗೂ ಅಂಗಡಿ ಮಾಲೀಕರ ಮುಖದಲ್ಲಿ ಬೇಸರ ಮೂಡಿದೆ.

    ಇಡೀ ರಾಜ್ಯಾದ್ಯಂತ ಬೇಸಿಗೆಯಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುತ್ತಿದ್ದ ಎಳನೀರು ಇದೀಗ ಅಂಗಡಿ ಮುಂಗಟ್ಟುಗಳ ಮುಂದೆ ಕಾಣಸಿಗುವುದೇ ಅಪರೂಪ ಎನ್ನುವ ಮಟ್ಟ ತಲುಪಿದೆ. ಈ ಹಿಂದೆ ಅಂಗಡಿಗಳ ಮುಂದೆ ರಾಶಿ ರಾಶಿ ಕಾಣಸಿಗುತ್ತಿದ್ದ ಎಳನೀರು ಬೇಡಿಕೆಯಿದ್ದರೂ ಬೇಕಾಗುವಷ್ಟು ಪೂರೈಕೆಯಾಗುತ್ತಿಲ್ಲ. ಕಳೆದೊಂದು ತಿಂಗಳಿಂದ ಮೈಸೂರು, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ಪ್ರದೇಶದಲ್ಲೇ ಎಳನೀರು ಬೇಡಿಕೆಯಷ್ಟು ಸಿಗದ ಪರಿಣಾಮ ಅಂಗಡಿಗಳಿಗೆ ಪೂರೈಕೆಗೂ ಅಸಾಧ್ಯವಾಗಿದೆ. ಅಂಗಡಿ ಮಾಲೀಕರು ಹಾಗೂ ಎಳನೀರು ಪ್ರಿಯರು ಪ್ರತಿ ದಿನ ಎಳನೀರಿಗಾಗಿ ಕಾದರೂ ಕೆಲವೊಂದು ಬಾರಿ ವಾರಕೊಮ್ಮೆ ಎಳನೀರು ಸಿಗುವ ಪರಿಸ್ಥಿತಿ ಕೆಲವೊಂದು ಪ್ರದೇಶದಲ್ಲಿದೆ. ಪಟ್ಟಣ ಪ್ರದೇಶದಲ್ಲಿ ಒಂದು ಎಳನೀರು ಈ ಬೇಸಿಗೆ ಕಾಲದಲ್ಲಿ ಸುಮಾರು 50-60 ರೂ.ಗೆ ಮಾರಾಟವಾಗುತ್ತಿದ್ದರೆ, ಗ್ರಾಮೀಣ ಭಾಗದಲ್ಲಿ 45-50 ರೂ.ಗೆ ಮಾರಾಟವಾಗುತ್ತಿದೆ. ಅದರಲ್ಲೂ ಅವಿಭಜಿತ ದ.ಕ. ಉಡುಪಿ ಭಾಗದ ಎಳನೀರಿಗೆ ಹೆಚ್ಚಿನ ಬೇಡಿಕೆಯಿದ್ದರೂ ಎಳನೀರು ಸಿಗುವುದೇ ಅಪರೂಪವಾಗಿದೆ.

    ಹವಾಮಾನ ವೈಪರೀತ್ಯ

    ಒಂದು ಕಾಲದಲ್ಲಿ ತೆಂಗು ಬೆಳೆಯಲ್ಲಿ 2ನೇ ಸ್ಥಾನದಲ್ಲಿದ್ದ ರಾಜ್ಯದಲ್ಲಿ ಇದೀಗ ಹೆಚ್ಚಿನ ತೆಂಗಿನ ತೋಟಗಳಿದ್ದರೂ ಎಳನೀರಿನ ಇಳುವರಿ ಮಾತ್ರ ಕಡಿಮೆಯಾಗಿದೆ. ಒಂದೆಡೆ ದಿನೇ ದಿನೇ ಏರುತ್ತಿರುವ ತಾಪಮಾನಕ್ಕೆ ಎಳನೀರು ಇಳುವರಿ ಕುಂಠಿತವಾಗಿದೆ ಎನ್ನುವುದು ಒಂದಷ್ಟು ಕೃಷಿಕರ ಮಾತು. ಬಿಸಿಲಿಗೆ ಚಿಕ್ಕ ಚಿಕ್ಕ ಕಾಯಿಗಳು ಉದುರುತ್ತಿದ್ದು ಎಳನೀರು ಇಳುವರಿಗೆ ದೊಡ್ಡ ಹೊಡೆತವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಇಳುವರಿಯಿದ್ದರೂ ಸುಡುಬಿಸಿಲಿನಲ್ಲಿ ಬೇಡಿಕೆ ಜಾಸ್ತಿಯಿದ್ದು ಪೂರೈಕೆಗೆ ಕಷ್ಟವಾಗಿದೆ. ಈ ಹಿಂದೆ ರಾಜ್ಯದಲ್ಲಿ ಬೆಳೆದ ತೆಂಗಿನಕಾಯಿ, ಎಳನೀರು ಹೊರರಾಜ್ಯಗಳಿಗೆ ರಫ್ತಾಗುತ್ತಿದ್ದು, ಇದೀಗ ರಾಜ್ಯದೊಳಗೆ ಮಾರಾಟಕ್ಕೂ ಎಳನೀರು ಪೂರ್ಣ ಪ್ರಮಾಣದಲ್ಲಿ ದೊರಕುತ್ತಿಲ್ಲ ಎನ್ನುವುದು ಕೃಷಿಕರ ಮಾತಾಗಿದೆ.

    ಅಂಗಡಿ ಮುಚ್ಚುವ ಪರಿಸ್ಥಿತಿ

    ರಾಜ್ಯದ ಕೆಲವೊಂದು ಜಿಲ್ಲೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ಎಳನೀರಿನ ಅಂಗಡಿ ಹಾಕಿ ಜೀವನ ಕಳೆಯುತ್ತಿದ್ದರು. ಆದರೆ ಇದೀಗ ಬೇಡಿಕೆಯ ಎಳನೀರು ವಾರದಲ್ಲಿ ಒಂದು ಬಾರಿಯೂ ಪೂರೈಕೆಯಾಗದ ಪರಿಣಾಮ ಅಂಗಡಿ ಮಾಲೀಕರು ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ನಿತ್ಯ 100ರಿಂದ 200ಕ್ಕೂ ಅಧಿಕ ಎಳನೀರು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಇದೀಗ ಕನಿಷ್ಠ 25 ಎಳನೀರು ಕೂಡ ಪೂರೈಕೆಯಾಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ.

    ಹಿಂದೆ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಅತಿ ಹೆಚ್ಚು ಎಳನೀರು ಮಾರಾಟ ಮಾಡುತ್ತಿದ್ದೆವು. ಆದರೆ ಈ ಬಾರಿ ಕಳೆದ ಒಂದೂವರೆ ತಿಂಗಳಿಂದ ಎಳನೀರಿನ ಪೂರೈಕೆಯಿಲ್ಲದೆ ವ್ಯಾಪರವೂ ಇಲ್ಲ. ದಿನಕ್ಕೆ 150ಕ್ಕೂ ಅಧಿಕ ಎಳನೀರು ಮಾರಾಟ ಮಾಡುತ್ತಿದ್ದ ನಮಗೆ ಇದೀಗ ವಾರಕ್ಕೆ 25 ಎಳನೀರು ಕಷ್ಟದ ಲ್ಲಿ ಸಿಗುವುದು. ಹೀಗಾಗಿ ಅಂಗಡಿ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.

    -ಚಂದ್ರಶೇಖರ್, ವ್ಯಾಪರಸ್ಥರು

    ಇತ್ತೀಚಿನ ಕೆಲದಿನಗಳಿಂದ ಎಳನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ನಿತ್ಯ ಎಳನೀರು ಪೂರೈಸುತ್ತಿದ್ದ ವಾಹನಗಳು ಇದೀಗ ವಾರದಲ್ಲಿ ಒಂದು ಬಾರಿ ಬರುವುದೇ ಅಪರೂಪ. ಬೇಡಿಕೆಯಷ್ಟು ಎಳನೀರು ಸಿಗದೆ ವ್ಯಾಪರಸ್ಥರ ಜತೆಯಲ್ಲಿ ಗ್ರಾಹಕರು ಎಳನೀರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

    -ಜಗನ್ನಾಥ್ ಪೂಜಾರಿ, ವ್ಯಾಪಾರಸ್ಥರು,ಉಡುಪಿ

    ಬೇಸಿಗೆಯ ಬಿಸಿಲಿಗೆ ಸ್ವಲ್ಪ ತಂಪಾಗಿಸಲು ಎಳನೀರು ಕುಡಿಯೋಣ ಎಂದು ಅಂಗಡಿಗೆ ತೆರಳಿದರೆ ಎಲ್ಲೂ ಕೂಡ ಎಳನೀರು ಸಿಗುತ್ತಿಲ್ಲ. ಅಧಿಕ ಬೆಲೆ ಕೊಟ್ಟರೂ ಸಿಗುತ್ತಿಲ್ಲ. ಬೇಡಿಕೆ ಹೆಚ್ಚಿದ್ದರೂ ಎಲ್ಲೂ ಕೂಡ ಎಳನೀರಿನ ರಾಶಿಗಳು ಕಾಣಸಿಗುತ್ತಿಲ್ಲ.

    -ಪೂರ್ಣೇಶ್, ಗ್ರಾಹಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts