ದಂತ ವೈದ್ಯಕೀಯ ಪದವೀಧರೆ ಸಂಶಯಾಸ್ಪದ ಸಾವು

mng--16 april swathi R shetty
Published on

ಮಂಗಳೂರು: ದಂತ ವೈದ್ಯಕೀಯ ಪದವೀಧರೆ ಯುವತಿಯೊಬ್ಬರು ಪಾಂಡೇಶ್ವರದ ಪೇಯಿಂಗ್ ಗೆಸ್ಟ್ (ಪಿಜಿ)ಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಮಂಗಳವಾರ ಬೆಳಗ್ಗೆ ಗಮನಕ್ಕೆ ಬಂದಿದೆ.


ಉಳ್ಳಾಲ ತಾಲೂಕಿನ ನರಿಂಗಾನ ನಿವಾಸಿ, ಸ್ವಾತಿ ಶೆಟ್ಟಿ (24) ಮೃತಪಟ್ಟವರು. ಎ.ಜೆ. ಆಸ್ಪತ್ರೆಯಲ್ಲಿ ಬಿಡಿಎಸ್ ಪದವಿ ಪೂರೈಸಿದ್ದ ಸ್ವಾತಿ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಮಂಗಳವಾರದಿಂದಲೇ ಕೆಲಸಕ್ಕೆ ಹಾಜರಾಗಬೇಕಿತ್ತು. ಸೋಮವಾರ ತಾಯಿ ಜೊತೆಗೆ ಪಾಂಡೇಶ್ವರ ಕ್ಲಿನಿಕ್‌ಗೆ ಬಂದು ಕೆಲಸದ ಬಗ್ಗೆ ಮಾತನಾಡಿ, ಪಾಂಡೇಶ್ವರ ಪೊಲೀಸ್ ಠಾಣೆ ಹಿಂಭಾಗದ ಪಿಜಿಯಲ್ಲಿ ಸೋಮವಾರ ಸಂಜೆಯಿಂದ ಉಳಿದಿದ್ದರು. ರಾತ್ರಿ ತಾಯಿ ಜತೆಗೆ ಮೊಬೈಲ್ ನಲ್ಲಿ ಮಾತನಾಡಿದ್ದ ಯುವತಿ, ವಿಪರೀತ ತಲೆನೋವು ಎಂದು ಹೇಳಿದ್ದರು. ಬಳಿಕ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದರು.


ಮಲಗಿದ್ದ ಸ್ವಾತಿಯ ದೇಹ ಬೆಳಗ್ಗೆ ತಣ್ಣಗಾಗಿದ್ದನ್ನು ಕಂಡು ಇತರರು ಪಿಜಿಯ ಸೂಪರ್ ವೈಸರ್ ಗಮನಕ್ಕೆ ತಂದಿದ್ದಾರೆ. ತಕ್ಷಣ ಆಂಬ್ಯುಲೆನ್ಸ್ ತರಿಸಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಕೊನೆಯುಸಿರೆಳೆದಿದ್ದಾಗಿ ವೈದ್ಯರು ತಿಳಿಸಿದ್ದರು. ಸ್ವಾತಿ ಶೆಟ್ಟಿಗೆ ಕೆಲಸ ಸಿಕ್ಕ ಕೂಡಲೇ ಪೋಷಕರು ಮದುವೆ ಮಾಡಲು ತಯಾರಿ ನಡೆಸಿದ್ದರು.


ಪಾಂಡೇಶ್ವರ ಪೊಲೀಸರು ಪಿಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಯಲ್ಲಿ ನೊರೆ ಇತ್ತು ಎಂದು ಜತೆಗಿದ್ದವರು ತಿಳಿಸಿದ್ದಾರೆ. ಆಕೆಗೆ ಫಿಟ್ಸ್ ಕಾಯಿಲೆ ಇದ್ದ ಬಗ್ಗೆ ಮನೆಯವರು ತಿಳಿಸಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net