More

    ಎಸ್ಸೆಸ್ಸೆಂ ರಿಪೋರ್ಟ್ ಕಾರ್ಡ್ ಬಿಡುಗಡೆಗೊಳಿಸಲಿ ಯಶವಂತರಾವ್ ಜಾಧವ್ ಸವಾಲು

    ದಾವಣಗೆರೆ: ಸೋಲಿನ ಭೀತಿಯಿಂದ ಹತಾಷರಾಗಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಜಿಲ್ಲೆಗೆ ಸಲ್ಲಿಸಿದ ಅಭಿವೃದ್ಧಿ ಕುರಿತಂತೆ ಎಸ್ಸೆಸ್ಸೆಂ ರಿಪೋರ್ಟ್ ಕಾರ್ಡ್ ಬಿಡುಗಡೆಗೊಳಿಸಲಿ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಸವಾಲು ಹಾಕಿದ್ದಾರೆ.
    ರೈಲು ನಿಲ್ದಾಣ ಉನ್ನತೀಕರಣ, ಜಿಲ್ಲಾಡಳಿತ ಭವನ, ಇಎಸ್‌ಐ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣ, ಸ್ಮಾರ್ಟ್‌ಸಿಟಿ ಹಲವು ಅಭಿವೃದ್ಧಿ ಕಾರ್ಯಗಳು ಸಿದ್ದೇಶ್ವರ ಅವಧಿಯಲ್ಲಿ ಆಗಿವೆ. ಹೀಗಿದ್ದರೂ ಅಭಿವೃದ್ಧಿ ಶೂನ್ಯ ಎಂದು ಹೇಳುವ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.  ಮಲ್ಲಿಕಾರ್ಜುನ್ ಅವರು ಗ್ಲಾಸ್ ಹೌಸ್ ಒಂದನ್ನು ಬಿಟ್ಟು ಒಂದೂ ಸರ್ಕಾರಿ ಕಚೇರಿ ಕಟ್ಟಡ ತರಲಿಲ್ಲ. ಅಭಿವೃದ್ಧಿ ಕೆಲಸಗಳ ಬಗ್ಗೆ ಎದೆತಟ್ಟಿಕೊಂಡು ಹೇಳಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸಿದ್ದೇಶ್ವರ ಅವರ ವೃತ್ತಿಯನ್ನು ರಾಜಕೀಯಕ್ಕೆ ತಳಕು ಹಾಕುವ ಸಚಿವರು ಕಲ್ಲೇಶ್ವರ ಮಿಲ್ನಲ್ಲಿ ಫೈರ್ ಬ್ರ್ಯಾಂಡ್ ಹೆಸರಿನಲ್ಲಿ ಗುಟ್ಖಾ ಕಂಪನಿ ನಡೆಸುತ್ತಿಲ್ಲವೇ? ಅದನ್ನು ಬಹಿರಂಗ ಪಡಿಸಲಿ. ಸಂಸದರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮುಂದುವರೆಸಿದರೆ ಶಾಮನೂರು ಮನೆತನದ ಹಗರಣಗಳನ್ನು ಬಯಲಿಗೆ ಎಳೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಡಾ.ಪ್ರಭಾ ಮಲ್ಲಿಕಾರ್ಜುನ್ ದಂತ ವೈದ್ಯರು. ಅವರು ಕ್ಷೇತ್ರದ ಜನರ ಆರೋಗ್ಯವನ್ನು ಯಾವ ರೀತಿ ಕಾಪಾಡಬಲ್ಲರು ಎಂದೂ ಜಾಧವ್ ಪ್ರಶ್ನಿಸಿದರು.
    ಜಿಲ್ಲಾ ಸಚಿವರು ಮತ ಚಲಾಯಿಸುವ ಐಎಂಎ ಕಟ್ಟಡದ ಮತಗಟ್ಟೆಯಲ್ಲಿ ಅವರಿಗೆ ಈವರೆಗೆ ಎಷ್ಟು ಮತಗಳ ಲೀಡ್ ಬರುತ್ತವೆ ತೋರಿಸಲಿ. ನಿಮ್ಮ ಬಡಾವಣೆಯ ಬೂತ್‌ನಲ್ಲಿಯೇ ನಿಮಗೆ ವೋಟು ಬರುತ್ತಿಲ್ಲ. ಹಿಂದುಳಿದ ವರ್ಗಗಳ ಮತಗಳಲ್ಲಿ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದೀರಿ ಎಂದು ಲೇವಡಿ ಮಾಡಿದರು.
    ಸುದ್ದಿಗೋಷ್ಠಿಯಲ್ಲಿ ಜಯಪ್ರಕಾಶ್ ಕೊಂಡಜ್ಜಿ, ಬಿ.ಎಂ. ಸತೀಶ್, ಲಿಂಗರಾಜ್ ಗೌಳಿ, ಸುರೇಶ್‌ರಾವ್ ಶಿಂಧೆ, ಶಂಕರಗೌಡ ಬಿರಾದಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts