More

  ಹೆನ್ರಿಕ್ ಕ್ಲಾಸೆನ್ ಹೋರಾಟ ವ್ಯರ್ಥ: ಆಂಡ್ರೆ ರಸೆಲ್ ಆಲ್ರೌಂಡ್ ಆಟಕ್ಕೆ ಒಲಿದ ಜಯ

  ಕೋಲ್ಕತ: ಆಲ್ರೌಂಡರ್ ಆಂಡ್ರೆ ರಸೆಲ್ (64* ರನ್, 25 ಎಸೆತ, 3 ಬೌಂಡರಿ, 7 ಸಿಕ್ಸರ್ ಹಾಗೂ 25ಕ್ಕೆ 2) ಅಮೋಘ ನಿರ್ವಹಣೆ ಹಾಗೂ ಆರಂಭಿಕ ಫಿಲ್ ಸಾಲ್ಟ್ (54 ರನ್, 40 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಕಿಕೊಟ್ಟ ಭದ್ರ ಬುನಾದಿಯ ನೆರವಿನಿಂದ ಆತಿಥೇಯ ಕೋಲ್ಕತ ನೈಟ್‌ರೈಡರ್ಸ್‌ ತಂಡ ತವರಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ರನ್‌ಮಳೆ ಹರಿಸಿ, ಐಪಿಎಲ್ 17ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು 4 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಮೆಂಟರ್ ಆಗಿ ಕೆಕೆಆರ್ ತಂಡಕ್ಕೆ ಯಶಸ್ವಿಯಾಗಿ ಪುನರಾಗಮನ ಕಂಡಿದ್ದಾರೆ.

  ಶನಿವಾರ ನಡೆದ 2ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ ಅಗ್ರ ಕ್ರಮಾಂಕದ ವೈಲ್ಯದ ನಡುವೆ ಸ್ಲಾಗ್ ಓವರ್‌ಗಳಲ್ಲಿ ಆಂಡ್ರೆ ರಸೆಲ್ ನಡೆಸಿದ ಬಿರುಸಿನಾಟದ ಬಲದಿಂದ 7 ವಿಕೆಟ್‌ಗೆ 208 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಪ್ರತಿಯಾಗಿ ಉತ್ತಮ ಆರಂಭ ಬಳಿಕ ನಿರಂತರ ವಿಕೆಟ್ ಕಳೆದುಕೊಂಡ ಸನ್‌ರೈಸರ್ಸ್‌, 7 ವಿಕೆಟ್‌ಗೆ 204 ರನ್‌ಗಳಿಸಲಷ್ಟೇ ಶಕ್ತವಾಯಿತು. ವಿಕೆಟ್ ಕೀಪರ್-ಬ್ಯಾಟರ್ ಹೆನ್ರಿಕ್ ಕ್ಲಾಸೆನ್ (63 ರನ್,29 ಎಸೆತ, 8 ಸಿಕ್ಸರ್) ಹಾಗೂ ಶಾಬಾಜ್ ಅಹ್ಮದ್ (16) ಜೋಡಿ ಆರನೇ ವಿಕೆಟ್‌ಗೆ 16 ಎಸೆತಗಳಲ್ಲಿ 58 ರನ್ ಕಸಿದು ತೋರಿದ ಪ್ರತಿರೋಧ ವ್ಯರ್ಥವಾಯಿತು.

  ಲಯ ತಪ್ಪಿದ ಹೈದರಾಬಾದ್: ಟೂರ್ನಿಯ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ಎಸೆದ ಐಪಿಎಲ್‌ನ ಮೊದಲ ಓವರ್‌ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ (32) ಹಾಗೂ ಇಂಪ್ಯಾಕ್ಟ್ ಆಟಗಾರ ಅಭಿಷೇಕ್ ಶರ್ಮ (32) 12 ರನ್ ಕಸಿದು ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 33 ಎಸೆತದಲ್ಲಿ 60 ರನ್‌ಗಳಿಸಿತು. 3ನೇ ವಿಕೆಟ್‌ಗೆ ಜತೆಯಾದ ರಾಹುಲ್ ತ್ರಿಪಾಠಿ (20) ಹಾಗೂ ಏಡೆನ್ ಮಾರ್ಕ್ರಮ್ (18) 3ನೇ ವಿಕೆಟ್‌ಗೆ 26 ಎಸೆತದಲ್ಲಿ 36 ರನ್‌ಗಳಿಸಿದ ಚೇಸಿಂಗ್‌ಗೆ ಬಲ ತುಂಬಿದರು. ಆದರೆ 5 ರನ್‌ಗಳ ಅಂತರದಲ್ಲಿ ಇವರ ವಿಕೆಟ್ ಪಡೆದ ಕೆಕೆಆರ್ ಮೇಲುಗೈ ಸಾಧಿಸಿತು. ಹೈದರಾಬಾದ್‌ಗೆ 18 ಎಸೆತದಲ್ಲಿ 60 ರನ್ ಅಗತ್ಯವಿದ್ದಾಗ ಕ್ಲಾಸೆನ್ ಹಾಗೂ ಶಾಬಾಜ್ ಜೋಡಿ ಹೈದರಾಬಾದ್ ಹೋರಾಟ ಜೀವಂತವಿರಿಸಿತು. 18ನೇ ಓವರ್‌ನಲ್ಲಿ 3 ಭರ್ಜರಿ ಸಿಕ್ಸರ್ ಸಹಿತ 21 ರನ್, ಸ್ಟಾರ್ಕ್ ಎಸೆದ ಮರು ಓವರ್‌ನಲ್ಲಿ ಒಟ್ಟು 4 ಸಿಕ್ಸರ್ ಬಾರಿಸಿದ ಈ ಜೋಡಿ ಗೆಲುವಿನ ಆಸೆ ಮೂಡಿಸಿತು. ಆದರೆ ಅಂತಿಮ ಓವರ್‌ನಲ್ಲಿ 13 ರನ್ ಬೇಕಿದ್ದಾಗ 8 ರನ್ ನೀಡಿ ಇವರಿಬ್ಬರ ವಿಕೆಟ್ ಪಡೆದ ಹರ್ಷಿತ್ ರಾಣಾ (33ಕ್ಕೆ3) ಕೆಕೆಆರ್‌ಗೆ ರೋಚಕ ಗೆಲುವು ತಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts