More

    ಬಿರುಬೇಸಿಗೆಯಲ್ಲಿ ತುಂಬಿದ ಅಣೆಕಟ್ಟು

    -ನರೇಂದ್ರ ಎಸ್. ಮರಸಣಿಗೆ, ಹೆಬ್ರಿ

    ಹೆಬ್ರಿ ತಾಲೂಕಿನ ಖಲೀಲ್‌ನಲ್ಲಿ ಸೀತಾ ನದಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಕೆಲವು ದಿನಗಳಿಂದ ಘಟ್ಟ ಪ್ರದೇಶಗಳಲ್ಲಿ ಮಳೆ ಹಾಗೂ ಹೆಬ್ರಿಯಲ್ಲಿ ಮಳೆಯಾದ ಕಾರಣ ತುಂಬಿ ಹರಿಯುತ್ತಿದೆ.

    ಅಣೆಕಟ್ಟೆ ನೀರನ್ನು ಚಾರ, ಹೆಬ್ರಿ, ಕುಚ್ಚೂರು, ಶಿವಪುರ ಗ್ರಾಮದ ಸಾವಿರಾರು ಮಂದಿ ಉಪಯೋಗಿಸುತ್ತಿದ್ದರು. ಏಪ್ರಿಲ್ ಹಾಗೂ ಮೇ ಆರಂಭದಲ್ಲಿ ಕಿಂಡಿ ಅಣೆಕಟ್ಟೆಯಲ್ಲಿ ನೀರು ಕನಿಷ್ಠ ಮಟ್ಟಕ್ಕೆ ತಲುಪಿ ಜನರಿಗೆ ಸಮಸ್ಯೆ ಆಗಿತ್ತು. ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆಯಾದ ಕಾರಣ ಕಿಂಡಿ ಅಣೆಕಟ್ಟಿನಲ್ಲಿ ನೀರು ತುಂಬಿ ಹರಿಯುತ್ತಿದೆ.

    ರೈತರಲ್ಲಿ ಉತ್ಸಾಹ

    ಅನೇಕ ದಿನಗಳ ಕಾಲ ನೀರಿಲ್ಲದ ಇದ್ದಿದ್ದರಿಂದ ರೈತರು ವಾರದಲ್ಲಿ ಒಂದು ದಿನ ಮಾತ್ರ ಕೃಷಿಗೆ ನೀರಾಯಿಸಲು ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಲಾಗುತ್ತಿತ್ತು. ಸೋಮವಾರ ಎಲ್ಲ ಪಂಪ್‌ಸೆಟ್‌ಗಳಿಗೆ ಮರು ಸಂಪರ್ಕ ನೀಡಿ ರೈತರು ಸದಾ ಕೃಷಿಗೆ ನೀರಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಭಾಗದಲ್ಲಿ ಬಹುತೇಕ ಅಡಕೆ, ತೆಂಗು ಬಿಸಿಲಿನ ತಾಪಕ್ಕೆ ಸುಟ್ಟು ಕರಕಲಾಗಿದೆ. ಅಡಕೆ ಸಸಿ, ಮರಗಳು ಸತ್ತುಹೋಗುವ ಲಕ್ಷಣ ಗೋಚರಿಸಿದೆ.

    ದುರಸ್ತಿ ಮಾಡುವುದು ಅನಿವಾರ್ಯ

    ಕಿಂಡಿ ಅಣೆಕಟ್ಟೆಯಲ್ಲಿ ಕೆಲವೆಡೆ ಕಬ್ಬಿಣದ ರಾಡ್ ಹೊರಗೆ ಕಾಣಿಸುತ್ತಿದೆ. ತಾತ್ಕಾಲಿಕವಾಗಿ ಶೇಡಿ ಮಣ್ಣು ಹಾಕಿ ನೀರು ಸೋರುತ್ತಿರುವುದನ್ನು ತಡೆಯಲಾಗಿದೆ. ಸಕಾಲದಲ್ಲಿ ಹೂಳು ಎತ್ತಬೇಕಾಗುತ್ತದೆ. ಗೇಟುಗಳನ್ನು ಕೂಡ ದುರಸ್ತಿ ಮಾಡಬೇಕಾಗಿದೆ. ಒಟ್ಟಿನಲ್ಲಿ ನೀರು ಪಡೆಯುವ ಪಂಚಾಯಿತಿಯವರು ಕೂಡ ಸಹಕಾರ ನೀಡದಾಗ ಈ ಕಿಂಡಿ ಅಣೆಟ್ಟೆಯ ಸಮಗ್ರ ನಿರ್ವಹಣೆ ಆಗುತ್ತದೆ.

    ಮೋಜುಮಸ್ತಿ ತಾಣ

    ರಾತ್ರಿ ಹೊತ್ತಿನಲ್ಲಿ ಕಿಂಡಿ ಅಣೆಕಟ್ಟೆಯ ಆಸುಪಾಸು ಗುಂಡುತುಂಡು ಪಾರ್ಟಿ ಮಾಡುವ ಚಾಳಿ ಕಂಡು ಬಂದಿದೆ. ಹಗಲು ಪಾಳಿಯಲ್ಲಿ ಕರ್ತವ್ಯ ನಿರತರು ಇರುವುದರಿಂದ ರಾತ್ರಿ ಹೊತ್ತಿನಲ್ಲಿ ಇಲ್ಲಿ ಬಂದು ಮದ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲಲ್ಲಿ ಮದ್ಯದ ಬಾಟಲಿಗಳು ಕಾಣಸಿಗುತ್ತವೆೆ.

    ಸಿಸಿಟಿವಿ ಅಳವಡಿಸಲು ಒತ್ತಾಯ

    ಕಿಂಡಿಣೆಕಟ್ಟೆ ನೀರನ್ನು ಕುಡಿಯಲು ಬಳಸುವುದರಿಂದ ಮೋಜುಮಸ್ತಿಯನ್ನು ತಡೆಯಲು ಈ ಭಾಗದಲ್ಲಿ ಸಿಸಿಟಿವಿ ಅಳವಡಿಸಲು ಮತ್ತು ಪೊಲೀಸ್ ಕಣ್ಗಾವಲು ಇಡಲು ಜನ ಒತ್ತಾಯಿಸಿದ್ದಾರೆ.

    ಹೆಬ್ರಿಯಲ್ಲಿ ಮಳೆಯಿಲ್ಲ

    ಸೀತಾನದಿ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವುದರಿಂದ. ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಹೆಬ್ರಿಯ ಜೀವನದಿ ಸೀತಾನದಿ ಕೊಂಚಮಟ್ಟಿಗೆ ಹರಿಯುತ್ತಿದೆ. ಹೆಬ್ರಿ ಭಾಗದಲ್ಲಿ ಇನ್ನು ಸಮರ್ಪಕವಾಗಿ ಮಳೆಯಾಗದ ಕಾರಣ ತೋಡುಗಳಲ್ಲಿ ನೀರು ಇಲ್ಲ. ಜನರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ.

    ಸದ್ಯಕ್ಕೆ ಕಿಂಡಿಅಣೆಕಟ್ಟು ತುಂಬಿ ಹರಿಯುತ್ತಿದೆ. ಸದ್ಯದಲ್ಲೇ ಮಳೆಯಾಗುವುದರಿಂದ ಯಾವುದೇ ಸಮಸ್ಯೆ ಇಲ್ಲ. ದುರಸ್ತಿಯ ಕುರಿತು ಶೀಘ್ರ ಕ್ರಮವಹಿಸಲಾಗುವುದು. ಭದ್ರತೆಯ ದೃಷ್ಟಿಯಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಮೋಜುಮಸ್ತಿ ತಡೆಯಲು ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗುವುದು.

    -ಸುರೇಂದ್ರನಾಥ್, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

    ಸದ್ಯಕ್ಕೆ ಕೊಂಚ ಮಳೆಯಾಗಿದೆ. ಇಂದಿನಿಂದ ರೈತರಿಗೆ ಈಗಾಗಲೇ ಸುಟ್ಟು ಹೋಗಿರುವ ಅಡಕೆ, ತೆಂಗುಗಳಿಗೆ ನೀರು ಹಾಯಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ವ್ಯವಸ್ಥೆಯಲ್ಲಿ ಯಾವುದೇ ಆದೇಶವಿಲ್ಲದೆ ನಡೆಯುತ್ತಿರುವ ಈ ಮೌಖಿಕ ನಿಲುವುಗಳು ಜನರಿಗೆ ಕ್ಲಪ್ತಕಾಲದಲ್ಲಿ ಗೊತ್ತಾಗುವುದಿಲ್ಲ. ಆದೇಶ ಹೊರಡಿಸುವಾಗ ಮಾಹಿತಿ ತಿಳಿಸಿ ಮಾಡುವುದು ಉತ್ತಮ.

    -ರಾಜೀವ್ ಶೆಟ್ಟಿ, ಹಿರಿಯ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts