More

  ದೇಶದ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮಹತ್ವದ್ದು

  ಕೆ.ಆರ್.ನಗರ: ಉತ್ತಮ ಸಮಾಜ ನಿರ್ಮಾಣ ಹಾಗೂ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
  ಪಟ್ಟಣದ ಶಿಕ್ಷಕರ ಭವನದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ತಾಲೂಕು ಸಂಘದಿಂದ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

  ಶಾಲೆಯಲ್ಲಿ ತಾಯಿಯ ಸ್ಥಾನದಲ್ಲಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕೃತಿ ಮತ್ತು ಒಳ್ಳೆಯ ಗುಣಗಳನ್ನು ಕಲಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ವ್ಯಕ್ತಿಗಳನ್ನು ನೀಡುವವರು ಶಿಕ್ಷಕರು. ಅಲ್ಲಿಂದ ವಿದ್ಯಾರ್ಥಿಗಳ ಜೀವನ ಪ್ರಾರಂಭವಾಗುತ್ತದೆ ಎಂದರು.

  ಯಾವುದೇ ಕೆಟ್ಟ ಚಟುವಟಿಕೆಗಳಿಗೆ ಗಮನ ಹರಿಸದೆ ಸಾಧನೆಯತ್ತ ವಿದ್ಯಾರ್ಥಿಗಳು ಸಾಗಲು ಶಿಕ್ಷಕರು ಮಾರ್ಗದರ್ಶನ ನೀಡುತ್ತಿರುತ್ತಾರೆ. ಆದರೆ ಶಿಕ್ಷಕರ ಮಾರ್ಗದರ್ಶನ ಪಡೆಯದೆ ಇರುವ ವಿದ್ಯಾರ್ಥಿಗಳು ಸಮಾಜದಲ್ಲಿ ಕೆಟ್ಟ ವಾತಾವರಣಕ್ಕೆ ಸಿಲುಕಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಸಿಗುತ್ತವೆ ಎಂದು ವಿಷಾದಿಸಿದರು.

  ಮಹಿಳೆಯರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆಗಳನ್ನು ಮಾಡಿದ್ದಾರೆ. ಆದರೆ ಅದನ್ನ ಗುರುತಿಸುವಲ್ಲಿ ಎಲ್ಲರೂ ವಿಫಲವಾಗಿದ್ದೇವೆ. ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸಾಧನೆಯನ್ನು ಮಾಡಿದವರು. ಅವರ ಹೆಸರಿನಲ್ಲಿ ತಾಲೂಕಿನಲ್ಲಿ ಶಿಕ್ಷಕಿಯರು ಮಾಡಿರುವ ಈ ಸಂಘ ಸಾಧನೆಯತ್ತ ಸಾಗುತ್ತಿದೆ. ಸಂಘದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
  ನಮ್ಮ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಹೊಸ ಯೋಜನೆಗಳನ್ನು ನೀಡಿದೆ. ಇವುಗಳನ್ನ ಬಳಸಿಕೊಂಡು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು. ಶಿಕ್ಷಣದಿಂದ ಯಾವ ಮಕ್ಕಳು ವಂಚಿತರಾಗದಂತೆ ಪೋಷಕರು ಮತ್ತು ಶಿಕ್ಷಕರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

  ಸಾವಿತ್ರಿಬಾಯಿ ಫುಲೆ ತಾಲೂಕು ಶಿಕ್ಷಕಿಯರ ಸಂಘದ ಅಧ್ಯಕ್ಷೆ ಕೆ.ಪಿ.ಭಾರತೀ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರನ್ನು ಆದರ್ಶವಾಗಿ ಇಟ್ಟುಕೊಂಡು ಎಲ್ಲ ಶಿಕ್ಷಕರು ಮತ್ತು ಶಿಕ್ಷಕಿಯರು ಸರ್ಕಾರದ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಹಾಗಾಗಿ ಶಾಸಕರು ಶಿಕ್ಷಕರ ಮತ್ತು ಶಿಕ್ಷಕಿಯರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸಬೇಕಿದೆ ಎಂದು ಮನವಿ ಮಾಡಿದರು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

  ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಮೈಸೂರಿನ ಯಶೋಧ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷೆ ಯಶೋದಾ ಅವರಿಗೆ ನೀಡಿ ಗೌರವಿಸಲಾಯಿತು.
  ಬಿಇಒ ಆರ್.ಕೃಷ್ಣಪ್ಪ, ಬಿಆರ್‌ಸಿ ವೆಂಕಟೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಸ್ವಾಮಿ, ಉಪಾಧ್ಯಕ್ಷೆ ಮೀನಾಕ್ಷಿ ಬಾಯಿ, ಸಾಮರಸ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್.ಮೋಹನ್‌ಕುಮಾರ್, ಇಸಿಒ ದಾಸಪ್ಪ, ಬಿಆರ್‌ಪಿಗಳಾದ ಪ್ರಿಯಬಾಯಿ, ಮಧುಶ್ರೀ, ಸಾವಿತ್ರಿಬಾಯಿ ಫುಲೆ ಸಂಘದ ಕಾರ್ಯದರ್ಶಿ ಮಂಜುಳಾ, ಪದಾಧಿಕಾರಿಗಳಾದ ಪ್ರಕೃತಿ, ಲಲಿತಾ, ಸುಮಾ ಪಟಾಗರ್, ರೂಪ, ಅನುಪಮಾ, ಶೃತಿ, ಕಾವೇರಿ, ಸಣ್ಣಮಲ್ಲಿಗೆ, ನಾಗವೇಣಿ, ಯಶಸ್ವಿನಿ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts