More

    ಜಾತಿ ಗಣತಿ ಬಹಿರಂಗಗೊಳಿಸದೆ ಮೋಸ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬೊಮ್ಮಾಯಿ ಆರೋಪ

    ಹಾನಗಲ್ಲ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಮಾಜಿಕ, ಆರ್ಥಿಕ ಜನಗಣತಿ ವರದಿಯನ್ನು ಬಹಿರಂಗಗೊಳಿಸದೇ ಹಿಂದುಳಿದ ವರ್ಗದವರಿಗೆ ಮೋಸ ಮಾಡುತ್ತಿದೆ. ಇದು ಚುನಾವಣೆಯಲ್ಲಿ ಮತ ಗಳಿಕೆಗೆ ಮಾಡಿರುವ ನಾಟಕ ಎಂದು ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

    ತಾಲೂಕಿನ ಮಾರನಬೀಡ ಗ್ರಾಮದಲ್ಲಿ ಶುಕ್ರವಾರ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಸಮಾಜಗಳ ನಡುವೆ ಒಡಕು ಮೂಡಿಸಲು ಜಾತಿಗಣತಿ ವರದಿ ಸ್ವೀಕರಿಸಿದೆ. ಆದರೆ, ಅದರಲ್ಲೇನಿದೆ ಎಂಬುದನ್ನು ಬಹಿರಂಗಪಡಿಸದೇ ಎಲ್ಲರನ್ನೂ ಕತ್ತಲೆಯಲ್ಲಿಟ್ಟಿದೆ. ತಳ ಸಮುದಾಯಗಳಿಗಾಗಿ ಮೀಸಲಿಟ್ಟ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಅವರನ್ನು ಅಭಿವೃದ್ಧಿಯಿಂದ ಹೊರಗಿಟ್ಟಿದ್ದಾರೆ. ರೈತರಿಗೆ ಬೆಳೆ ವಿಮೆಯನ್ನು ಇನ್ನೂ ನೀಡಿಲ್ಲ. ರಾಜ್ಯ ಸರ್ಕಾರ ತನ್ನ ಪಾಲಿನ ವಂತಿಗೆ ಭರಿಸದಿರುವುದರಿಂದ ಪರಿಹಾರ ವಿತರಣೆ ವಿಳಂಬವಾಗಿದೆ. ರಾಜ್ಯ ಸರ್ಕಾರ ಎಲ್ಲ ಆದಾಯವನ್ನೂ ಉಚಿತ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ. ಹೀಗಾಗಿ, ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದರು.

    ಸಿದ್ದರಾಮಯ್ಯ ಸರ್ಕಾರ ರೈತರಿಗೆ ಬರಗಾಲ ಪರಿಹಾರ ವಿತರಿಸದೇ ಕೇಂದ್ರ ಸರ್ಕಾರವನ್ನು ದೂಷಿಸುತ್ತಿದೆ. ಮೊದಲು ತಮ್ಮ ಪಾಲನ್ನು ರೈತರಿಗೆ ಬಿಡುಗಡೆಗೊಳಿಸಬೇಕಿತ್ತು. ನಮ್ಮ ಅವಧಿಯಲ್ಲಿ ಕೇಂದ್ರಕ್ಕಿಂತ ಮೊದಲು ನಾವೇ ವಿತರಿಸಿದ್ದೆವು. ಎಲ್ಲದರಲ್ಲೂ ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ದಿನಕ್ಕೊಂದು ಅತ್ಯಾಚಾರ, ಕೊಲೆ ಮುಂತಾದ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಇವುಗಳು ಸಾಮಾನ್ಯ ಎಂದು ಗೃಹ ಸಚಿವರೇ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ. ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಬೇಕು. ಲೋಕಸಭೆಯಲ್ಲಿ ನಿಮ್ಮೆಲ್ಲರ ಧ್ವನಿಯಾಗಿ, ಸೇವಕನಾಗಿ ಕೆಲಸ ಮಾಡುತ್ತೇನೆ ಎಂದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ನನ್ನ ಮೂರು ಅವಧಿಯಲ್ಲಿ ನೀಡಿದ್ದ ಬೆಂಬಲದಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಿದ ಸಾರ್ಥಕತೆಯಿದೆ. 10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಭಾರತ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಬರಲು ಮತ್ತೊಮ್ಮೆ ಮೋದಿ ಅವರನ್ನು ಬೆಂಬಲಿಸಬೇಕಿದೆ. ಬಸವರಾಜ ಬೊಮ್ಮಾಯಿ ಇದೇ ಕ್ಷೇತ್ರದವರು. ಅವರ ಗೆಲುವಿನಿಂದ ಕ್ಷೇತ್ರಕ್ಕೆ ಬಹಳಷ್ಟು ಅನುಕೂಲ ಆಗಲಿದೆ. ನನಗೆ ನೀಡಿದ ಬೆಂಬಲವನ್ನು ಬೊಮ್ಮಾಯಿ ಅವರಿಗೂ ನೀಡಬೇಕೆಂದು ಉದಾಸಿ ಮನವಿ ಮಾಡಿದರು.

    ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಬಸವರಾಜ ಬೊಮ್ಮಾಯಿ ವಿಪ ಸದಸ್ಯರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಇಡೀ ರಾಜ್ಯದ ಅಗತ್ಯಗಳನ್ನು ಬಲ್ಲವರಾಗಿದ್ದಾರೆ. ಅವರು ಸಂಸದರಾದರೆ ಕೇಂದ್ರದ ಸಹಕಾರ ಪಡೆಯಲು ಸಹಕಾರಿಯಾಗಲಿದೆ. ಬೊಮ್ಮಾಯಿ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದರು.

    ಮಾಜಿ ಶಾಸಕ ಶಿವರಾಜ ಸಜ್ಜನರ, ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಜೆಡಿಎಸ್ ತಾಲೂಕಾಧ್ಯಕ್ಷ ಬಸನಗೌಡ ಪಾಟೀಲ, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡರ, ಜಿಪಂ ಮಾಜಿ ಸದಸ್ಯರಾದ ಮಾಲತೇಶ ಸೊಪ್ಪಿನ, ಎಂ.ಆರ್. ಪಾಟೀಲ, ರಾಘವೇಂದ್ರ ತಹಶೀಲ್ದಾರ, ಕಲ್ಯಾಣಕುಮಾರ ಶೆಟ್ಟರ, ಬಿ.ಎಸ್. ಅಕ್ಕಿವಳ್ಳಿ, ಬಸವರಾಜ ಸಂಶಿ, ಸಚಿನ್ ರಾಮಣ್ಣನವರ, ಎಸ್.ಎಂ. ಕೋತಂಬ್ರಿ, ವೀರಪ್ಪ ನಿಂಬಣ್ಣನವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts