More

    ಜೀವ ಹಿಂಡುತ್ತಿದೆ ಕಾರ್ಖಾನೆ

    ವಿಜಯವಾಣಿ ಸುದ್ದಿಜಾಲ ಕುಂದಾಪುರ

    ಹೊರಗಿಂದ ಮನೆಗೆ ಯಾರಾದರೂ ಅತಿಥಿ ಬಂದರೆ ಸಮಯ ಕಳೆದಂತೆಲ್ಲಾ ಸಣ್ಣಗೆ ಕೆಮ್ಮಲು ಶುರು ಮಾಡುತ್ತಾರೆ. ಮನೆಯಲ್ಲಿದ್ದ ಸದಸ್ಯರಿಗೆ ಕೆಮ್ಮು ದಮ್ಮು ಮಾಮೂಲು. ನಿವೃತ್ತ ಜೀವನ ನಡೆಸುತ್ತಿರುವವರು ಕೆಲವರಿಗೆ ಆಕ್ಸಿಜನ್ ಮಾಸ್ಕ್ ಕಡ್ಡಾಯ. ಕಣ್ಣುರಿ, ಮೈಕೈಗಳಿಗೆ ಮೆಣಸಿನ ಪೌಡರ್ ಹಚ್ಚಿಕೊಂಡ ಅನುಭವ!

    ಕುಂದಾಪುರ ತಾಲೂಕು ತಲ್ಲೂರು ಗ್ರಾಮ ಆರ್.ಕೆ.ಲೇಔಟ್ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಿದು. ಕೈಗಾರಿಕಾ ನಿಯಮ ಉಲ್ಲಂಘಸಿ, ವಸತಿ ಏರಿಯಾದಲ್ಲಿ ಆರಂಭವಾದ ಸಾಂಬಾರು ಪದಾರ್ಥ ಸಿದ್ಧ ಇಂಡಸ್ಟ್ರಿಯ ಮೆಣಸಿನ ಘಾಟಿಗೆ ಜನರ ಬದುಕು ನಲುಗುತ್ತಿದೆ. ಶಬ್ದ ಮಾಲಿನ್ಯ ಕಿರಿಕಿರಿಗೆ, ದೊಡ್ಡ ವಾಹನಗಳ ನಿಲುಗಡೆಗೆ ಮನೆಗೆ ಬರುವುದಕ್ಕೂ ಕಷ್ಟ ಪಡಬೇಕು. ವಸತಿ ಸಮುಚ್ಛಯವನ್ನು ಈ ಕಾರ್ಖಾನೆ ಜೈಲಾಗಿ ಬದಲಾಯಿಸಿದೆ. ಬೇಸರ ಕಳೆಯಲು ಮನೆ ಸಿಟ್‌ಔಟ್‌ನಲ್ಲಿ ಕೂತರ ಕಾರ್ಖಾನೆಯ ಮಾಡುನೋಡಿ ಖುಷಿ ಪಡುವ ಸ್ಥಿತಿ.

    ಪರವಾನಗಿ ಇಲ್ಲ

    ತಲ್ಲೂರು ರೆಸಿಡೆನ್ಸಿ ಏರಿಯಾಕ್ಕೆ ಜಿಲ್ಲಾ ಪರಿಸರ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜು ಭೇಟಿ ನೀಡಿದ ಸಂದರ್ಭ ಪರಿಸರ ವಾಸಿಗಳು ತಮಗಾಗುತ್ತಿರುವ ಸಮಸ್ಯೆ ತಿಳಿಸಿದ್ದಾರೆ. ಪರಿಸರ ಇಲಾಖೆಯಿಂದ ಇಂಡಸ್ಟ್ರಿಗೆ ಯಾವುದೇ ಪರವಾನಗಿ ನೀಡಿಲ, ಅಲ್ಲಿಯ ಪರಿಸರದ ನೀಲಿನಕ್ಷೆ ಸ್ಥಳದಲ್ಲಿ ಮಾಡಿಕೊಂಡು ಪರಿಶೀಲನೆ ಮಾಡುವ ಭರವಸೆ ಡಾ.ರಾಜು ನೀಡಿದ್ದಾರೆ.

    ಗ್ರಾಪಂ ಅನುಮತಿ ಕೊಟ್ಟಿಲ್ಲ

    ಹಿಂದೆ ಸಣ್ಣಮಟ್ಟದಲ್ಲಿ ಸಂಬಾರು ಪದಾರ್ಥ ಸಿದ್ಧಮಾಡುತ್ತಿದ್ದರು. ಆಗ ಜನರಿಗೆ ಅಷ್ಟೊಂದು ಸಮಸ್ಯೆ ಆಗಿರಲಿಲ್ಲ. ಸಣ್ಣಮಟ್ಟದಲ್ಲಿದ್ದ ಇಂಡಸ್ಟ್ರಿ ವಿಸ್ತರಣೆಗೊಳ್ಳುತ್ತಾ ಹೋಗುತ್ತಿದ್ದಂತೆ ಸಮಸ್ಯೆ ವಿಸ್ತರಿಸಿದೆ. ದೊಡ್ಡ ದೊಡ್ಡ ಯಂತ್ರಗಳು ಸಂಬಾರು ಪದಾರ್ಥ, ಮೆಣಸು ಕುಟ್ಟುವ ಶಬ್ದ ಪರಿಸರದ ಜನರ ನೆಮ್ಮದಿಗೆ ಕೊಳ್ಳಿಯಿಟ್ಟಿದೆ. ಮೆಣಸು ಪುಡಿ ಹಾಗೂ ಮೆಣಸು ಹುರಿಯುವಾಗ ಬರುವ ಘಾಟು ಉಸಿರಾಟಕ್ಕೆ ಕಷ್ಟ ಪಡುವಂತೆ ಮಾಡಿದೆ. ಕಾರ್ಖಾನೆ ಆಸುಪಾಸು 16 ಮನೆಗಳಿದ್ದು, ಇನ್ನು ಆರು ಮನೆ ನಿರ್ಮಾಣವಾಗಲಿದೆ. ಮೆಣಸು ಕಾಯಿಸುವಾಗಿನ ಘಾಟು ಸುತ್ತಮುತ್ತಲಿನ ಪ್ರದೇಶಕ್ಕ್ಕೂ ಆವರಿಸಿಕೊಳ್ಳುತ್ತಿದೆ. ಗಾಳಿಯಲ್ಲಿ ಬರುವ ಮೆಣಸಿನ ಧೂಳು ಪರಿಸರದ ಜನರ ಮೈಮೇಲೆ ಕೂರುವುದರಿಂದ ಮೈಯಲ್ಲಿ ನವೆ ಕಾಣಿಸಿಕೊಳ್ಳುತ್ತದೆ. ಮೆಣಸಿನ ನೀರಿಗೊಂದು ಡ್ರೈನೇಜು ಇಲ್ಲ. ಚರ್ಮದಲ್ಲಿ ಉರಿ, ಬೆವರು ಹನಿ ಕಣ್ಣಿಗೆ ಜಾರಿದರೆ ಕಣ್ಣುರಿ ಮಾಮೂಲು. ಘಾಟು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದ್ದು, ವಯಸ್ಸಾದವರು ಉಸಿರಾಟಕ್ಕೆ ತೇಕುವಂತೆ ಮಾಡುತ್ತದೆ. ಯಾವುದೇ ನಿಯಮ ಪಾಲಿಸದೆ, ವಸತಿ ಪ್ರದೇಶದಲ್ಲಿ ಕಾರ್ಖಾನೆ ಆರಂಭಿಸಲಾಗಿದೆ. ಗ್ರಾಪಂ ಕೂಡ ಅನುಮತಿ ಕೊಟ್ಟಿಲ್ಲ. ಸಮಸ್ಯೆಗಳ ಬಗ್ಗೆ ಗ್ರಾಪಂ ದೂರು ನೀಡಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ತಲ್ಲೂರು ಸ್ಥಳಕ್ಕೆ ಭೇಟಿ ನೀಡಿ ಕೆಲಸ ನಿಲ್ಲಿಸುವಂತೆ ಗಂಟಲು ದೊಡ್ಡದು ಮಾಡಿದ್ದರಿಂದ ಸದ್ಯಕ್ಕೆ ಕೆಲಸ ನಿಲ್ಲಿಸಿದ್ದಾರೆ ಎಂದು ಪರಿಸರ ವಾಸಿಗಳು ವಿಜಯವಾಣಿಗೆ ತಿಳಿಸಿದ್ದಾರೆ.

    ಮೆಣಸಿನ ಘಾಟು ಉಸಿರಾಟದ ಮೇಲೆ ನೇರೆ ಪರಿಣಾಮ ಬೀರುತ್ತಿದ್ದು, ಅಸ್ತಮಾ, ಉಸಿರಾಟದ ಸಮಸ್ಯೆ ಇರುವವರಿಗೆ ಅಪಾಯ ತರುತ್ತಿದೆ, ಸ್ಕಿನ್ ಡಿಸೀಸ್, ಶ್ವಾಸಕೋಶದ ಸಮಸ್ಯೆಗೆ ಕಾರಣವಾಗುತ್ತದೆ.

    -ಡಾ.ನಾಗೇಶ್, ಹೃದಯರೋಗ ತಜ್ಞ, ತಾಲೂಕು ಸರ್ಕಾರಿ ಆಸ್ಪತ್ರೆ

    ಕೈಗಾರಿಕೆ ನಿಯಮದ ಪ್ರಕಾರ ವಸತಿ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸಲು ಅವಕಾಶ ಇಲ್ಲದಿದ್ದರೂ, ಸಾಧ್ಯವಾಗಿದ್ದು ಹೇಗೆ ಎನ್ನುವುದು ಗೊತ್ತಾಗುತ್ತಿಲ್ಲ. ನಮ್ಮ ಏರಿಯಾದಲ್ಲಿ ರಸ್ತೆಗಳು ಕಿರಿದಾಗಿದ್ದು, ಇಲ್ಲಿಗೆ ಬರುವ ವಾಹನಗಳಿಂದ ನಾವು ಮನೆಗೆ ವಾಹನ ತರಬೇಕಿದ್ದರೆ ರಸ್ತೆ ಎಷ್ಟು ಹೊತ್ತಿಗೆ ಕ್ಲಿಯರ್ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಇಂಡಸ್ಟ್ರಿ ವಿಸ್ತರಣೆ ದೊಡ್ಡ ಮಟ್ಟದ ಮಾಡು, ಅದಕ್ಕೆ ಸೀಟ್ ಹೊದಿಕೆ ಹಾಕುವುದರಿಂದ ರೆಸಿಡೆನ್ಸಿಯಲ್ ಏರಿಯಾ ಜೈಲಾಗಿ ಬದಲಾಗುತ್ತದೆ. ಇಲ್ಲಿ ಬದುಕೋದು ಕಷ್ಟವಾಗಿದ್ದು, ಒಂದಾ ಇಂಡಸ್ಟ್ರಿ ಬಂದ್ ಮಾಡಲಿ, ಆಗದಿದ್ದಲ್ಲಿ ನಮಗೆ ಬದಲಿ ವ್ಯವಸ್ಥೆ ನೀಡಲಿ.

    -ಬಿಂದು ತಂಗಪ್ಪನ್, ವಕೀಲರು, ಆರ್.ಕೆ.ಪೂಜಾರಿ ಲೇಔಟ್, ತಲ್ಲೂರು

    ರೆಸಿಡೆನ್ಸಿ ಏರಿಯಾದ 10 ಕಿಮೀ ಅಂತರದಲ್ಲಿ ಇಂಡಸ್ಟ್ರಿಗೆ ಅವಕಾಶ ಇಲ್ಲದಿದ್ದರೂ ಇಷ್ಟು ದೊಡ್ಡಮೊಟ್ಟದ ಸಂಬಾರು ಪದಾರ್ಥ ಸಿದ್ದತೆ ಇಂಡಸ್ಟ್ರಿ ಅವಕಾಶ ನೀಡಿ, ನಮ್ಮ ಬದುಕು ನರಕ ಮಾಡಲಾಗಿದೆ. ಮಕ್ಕಳಲ್ಲಿ ಚಿಕನ್‌ಪಾಕ್ಸ್ ಕಾಣಿಸಿದರೆ, ಉಸಿರಾಟ ದೊಡ್ಡ ಸಮಸ್ಯೆಯಾಗಿ ಕೆಮ್ಮು, ಕಫ ಜೀವ ಹಿಂಡುತ್ತದೆ. ಮನೆಗೆ ಅತಿಥಿಗಳು ಬಂದರೆ ಮೆಣಸಿನ ಘಾಟು ಸಹಿಸಲಾಗದೆ ಮರಳಿ ಹೋಗುತ್ತಿದ್ದಾರೆ. ಜಿಲ್ಲಾಡಳಿತ ನಮ್ಮನ್ನು ಸಂಕಷ್ಟದಿಂದ ಪಾರು ಮಾಡಲಿ.

    -ಶಿವಾನಂದ, ಆರ್.ಕೆ.ಪೂಜಾರಿ ಲೇಔಟ್ ತಲ್ಲೂರು ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts