More

    ಕಾಪುವಿನಲ್ಲಿ ನೀರಿಗೆ ಹಾಹಾಕಾರ

    -ಹೇಮನಾಥ್ ಪಡುಬಿದ್ರಿ

    ಹೆಚ್ಚುತ್ತಿರುವ ಬಿಸಿಲ ತಾಪ, ಕುಸಿಯುತ್ತಿರುವ ಅಂತರ್ಜಲ ಮಟ್ಟದಿಂದಾಗಿ ಕಾಪು ತಾಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ನೀರಿಗೆ ಹಾಹಾಕಾರದ ಪರಿಸ್ಥಿತಿ ತಂದೊಡ್ಡಿದೆ. ಮಾರ್ಚ್ ತಿಂಗಳಾರಂಭದಲ್ಲಿಯೇ ಕೆಲ ಗ್ರಾಪಂಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರೂ, ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದೆ ಇದ್ದ ಕೊಳವೆ ಬಾವಿ, ತೆರೆದ ಬಾವಿಗಳೆಲ್ಲ ಬತ್ತಿ ನೀರಿಗೆ ಪರದಾಡುವಂತೆ ಮಾಡಿದೆ.

    ಕಳೆದ ಮೂರು ವರ್ಷದಲ್ಲಿ ಬೇಸಗೆ ಆರಂಭದವರೆಗೆ ಮಳೆಯಾಗಿದ್ದ ಪರಿಣಾಮ ನೀರಿನ ಸಮಸ್ಯೆ ಅಷ್ಟಾಗಿ ಕಾಡಿರದ ಕಾಪು ತಾಲೂಕಿನ ಕೋಟೆ, ಕಟಪಾಡಿ, ಎಲ್ಲೂರು, ಪಲಿಮಾರು, ಹೆಜಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಕೊರತೆ ತೀವ್ರವಾಗಿದೆ. ಕಟಪಾಡಿ ಹಾಗೂ ಕೋಟೆ ಗ್ರಾಪಂಗಳಿಗೆ ಟ್ಯಾಂಕರ್ ನೀರೇ ಗತಿಯಾಗಿದೆ. ಕಾಪು ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದರೂ, ನೀರಿನ ಮೂಲಗಳ ಕೊರತೆಯಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಈ ಯೋಜನೆಯಡಿ ತೆರೆದ ಬಾವಿ, ಕೊಳವೆ ಬಾವಿ ನಿರ್ಮಾಣಕ್ಕೆ ಅವಕಾಶವಿದ್ದರೂ, ಚುನಾವಣಾ ನೀತಿ ಸಂಹಿತೆ ಅದಕ್ಕೂ ಸಂಚಕಾರ ತಂದಿತ್ತು. ಇದೀಗ ಚುನಾವಣೆ ಮುಗಿದಿದ್ದು, ಕೆಲವೆಡೆ ಗ್ರಾಪಂಗಳಿಂದ ಕೊಳವೆಬಾವಿ ನಿರ್ಮಾಣಕ್ಕೆ ಮುಂದಡಿಯಿಡಲಾಗಿದೆ. ಆದರೆ ಕೊಳವೆ ಬಾವಿಗಳಲ್ಲೂ ನಿರೀಕ್ಷಿತ ಮಟ್ಟದಲ್ಲಿ ನೀರು ಲಭ್ಯವಾಗದೆ ಗ್ರಾಪಂಗಳು ಇಕ್ಕಟ್ಟಿಗೆ ಸಿಲುಕಿವೆ.

    ನೀರಿನ ಮೂಲಕ್ಕೆ ಹುಡುಕಾಟ

    ಶಾಂಭವಿ, ಪಾಪನಾಶಿನಿ, ಸ್ವರ್ಣಾ ನದಿಗಳಿಂದ ಸುತ್ತುವರಿದಿರುವ ಕಾಪು ಕ್ಷೇತ್ರದಲ್ಲಿ ಬೇಸಗೆಯಲ್ಲಿ ನೀರಿನ ಸಮಸ್ಯೆ ತಪ್ಪಿದ್ದಲ್ಲ. ಇಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರಗಳಿಂದ ಅದೆಷ್ಟೋ ಯೋಜನೆಗಳು ರೂಪಿತವಾದರೂ ಗುರಿಮುಟ್ಟುವಲ್ಲಿ ವಿಫಲವಾಗಿವೆ. 2024ರ ವೇಳೆಗೆ ಪ್ರತಿ ಮನೆಗೂ ಕುಡಿಯುವ ನೀರು ತಲುಪಬೇಕೆಂಬ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯಡಿ ಕಾಪು ವಿಧಾನಸಭಾ ಕ್ಷೇತ್ರದ 26 ಗ್ರಾಪಂಗಳಿಗೆ 65.63 ಕೋಟಿ ರೂ. ಮಂಜೂರಾಗಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅದಕ್ಕೆ ವಾರಾಹಿ ಮೂಲದಿಂದ ನೀರು ಪೂರೈಸಬೇಕಿದ್ದು, ಅಲ್ಲಿಂದ ಕ್ಷೇತ್ರಕ್ಕೆ ನೀರು ಹರಿದರಷ್ಟೆ ಬವಣೆ ನೀಗಲಿದೆ. ಅಲ್ಲಿಯವರೆಗೆ ಗ್ರಾಪಂಗಳ ಇದ್ದ ಮೂಲಗಳೇ ಆಸರೆಯಾಗಬೇಕಿದೆ.

    ಕೊಳವೆ ಬಾವಿ ಮರುಪೂರಣ

    ಕ್ಷೇತ್ರದಲ್ಲಿ ನೂರಾರು ಕೊಳವೆ ಬಾವಿ ಕೊರೆಯಲಾಗಿದ್ದು, ನೀರಿಲ್ಲದೆ ಅವು ಪಾಳುಬಿದ್ದಿವೆ. ಮಳೆಗಾದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ಕೊಳವೆ ಬಾವಿಗಳ ಜಲ ಮರುಪೂರಣಕ್ಕೆ ಒತ್ತು ನೀಡಬೇಕು. ಈಗಿರುವ ಕಿಂಡಿ ಅಣೆಕಟ್ಟುಗಳನ್ನು ಸೂಕ್ತವಾಗಿ ನಿರ್ವಹಿಸಿ ಮಳೆಗಾಲ ಮುಕ್ತಾಯದ ವೇಳೆ ಹಲಗೆ ಅಳವಡಿಸುವ ಕಾರ್ಯ ಮಾಡಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪ್ರಯತ್ನಗಳಾಬೇಕಿದೆ.

    ಪಲಿಮಾರು ಗ್ರಾಮದ ಅಡ್ವೆ ಸನ್ನೋಣಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು, ಕೊಳವೆಬಾವಿ ನಿರ್ಮಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ನೀರಿಲ್ಲದೆ ತೊಂದರೆಯಾಗಿದೆ. ವಾರ್ಡ್‌ನಲ್ಲಿ 3 ದಿನಗಳಿಗೊಮ್ಮೆ ಟ್ಯಾಂಕರ್ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ.

    -ರಶ್ಮಿ ಎಸ್.ಪೂಜಾರಿ ಸನ್ನೋಣಿ, ಸದಸ್ಯೆ, ಪಲಿಮಾರು ಗ್ರಾಪಂ

    ಕಾಪು ತಾಲೂಕಿನ ಕೋಟೆ, ಕಟಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಈ ಗ್ರಾಪಂಗಳಿಗೆ ದಿನದಲ್ಲಿ ಐದಾರು ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಹೆಚ್ಚಿನ ಗ್ರಾಪಂಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ನೀರಿನ ಮೂಲಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಕೊಳವೆ ಬಾವಿ, ತೆರೆದ ಬಾವಿ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದು, ಗ್ರಾಪಂ 16ನೇ ಹಣಕಾಸು ನಿಧಿ ಬಳಸಿ ಕಾಮಗಾರಿ ನಡೆಸಲು ಸೂಚಿಸಲಾಗಿದೆ. ನೀತಿ ಸಂಹಿತೆಯಿಂದ ಕಾಮಗಾರಿ ನಡೆಸಲು ವಿಳಂಬವಾಗಿದ್ದು, ಚುನಾವಣೆ ಮುಗಿದು ಇದೀಗ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ.

    -ನವೀನ್ ಕುಮಾರ್, ಇಒ, ಕಾಪು ತಾಪಂ

    ಕಾಪು ಕ್ಷೇತ್ರದ ನೀರಿನ ಸಮಸ್ಯೆ ಕುರಿತಂತೆ ಅಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ. ಪುರಸಭೆ, ಎಲ್ಲ ಗ್ರಾಪಂ ಹಾಗೂ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಸರ್ಕಾರದ ಗಮನ ಸೆಳೆದು ತುರ್ತು ಪರಿಹಾರ ಕೈಗೊಳ್ಳಲು ಪ್ರಯತ್ನಿಸಲಾಗುವುದು.

    -ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts