More

    ಕಾರ್ಕಳದಲ್ಲಿ ಜಲ ತತ್ವಾರ

    -ಹರಿಪ್ರಸಾದ್ ನಂದಳಿಕೆ ಕಾರ್ಕಳ

    ದಿನೇದಿನೇ ಬಿಸಿಲ ಬೇಗೆ ಏರುತ್ತಿದ್ದು ಜಲ ಮೂಲಗಳು ಸಂಪೂರ್ಣ ಬತ್ತುತ್ತಿವೆ. ನಿತ್ಯ ಬಳಕೆಯ ನೀರಿನ ಜೊತೆಗೆ ಕುಡಿಯುವ ನೀರಿಗೂ ಕಾರ್ಕಳ ತಾಲೂಕಿನಲ್ಲಿ ಹಾಹಾಕಾರ ಶುರುವಾಗಿದೆ.

    ಕಾರ್ಕಳ ತಾಲೂಕಿನ 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಾರಿ ನೀರಿನ ಸಮಸ್ಯೆ ಅತಿಯಾಗಿ ಕಾಡುತ್ತಿದೆ. ಪಂಚಾಯಿತಿ ವತಿಯಿಂದ ನಳ್ಳಿ ನೀರಿನ ಸಂಪರ್ಕ ಇದ್ದರೂ ಕೆಲವೊಂದು ಗ್ರಾಪಂಗಳಲ್ಲಿ ಈಗ ಎರಡು ಮೂರು ದಿನಕೊಮ್ಮೆ ನೀರು ಬರುವುದೂ ಅಪರೂಪ. ನಳ್ಳಿ ನೀರು ಬಂದರೂ ಅರ್ಧ ಗಂಟೆಯೂ ಇರುವುದಿಲ್ಲ ಎನ್ನುವ ಆರೋಪ ಗ್ರಾಮಸ್ಥರದು. ಸರ್ಕಾರಿ ಬಾವಿ ಸಹಿತ ಖಾಸಗಿ ಬಾವಿಗಳೂ ಸಂಪೂರ್ಣ ಬತ್ತಿದ್ದು ಕುಡಿಯುವ ನೀರಿಗಾಗಿ ಗ್ರಾಮೀಣ ಜನ ಪರದಾಡುತ್ತಿದ್ದಾರೆ. ಕೆಲವು ಭಾಗಗಳಲ್ಲಿ ಗ್ರಾಪಂಗಳು ಟ್ಯಾಂಕರ್ ಮೂಲಕ ನೀರು ನೀಡಿದರೂ ಒಂದು ದಿನಕ್ಕೂ ನೀರು ಸಾಕಾಗುವುದಿಲ್ಲ ಎನ್ನುವ ಆರೋಪ ಇದೆ. ಕೆಲವು ಕಡೆ 300 ಲೀ.ನಷ್ಟು ನೀರನ್ನು ಗ್ರಾಪಂ ವತಿಯಿಂದ ನೀಡಲಾಗುತ್ತಿದ್ದು ಅದನ್ನು ಹೇಗೆ ಬಳಸುವುದು ಎಂದು ಜನ ಪ್ರಶ್ನಿಸುತ್ತಿದ್ದಾರೆ.

    ಪ್ರತಿ ಮನೆಗೂ ನಳ್ಳಿ ನೀರಿನ ಸಂಪರ್ಕ ವ್ಯವಸ್ಥೆಯಿದ್ದು ಹಲವು ಕಡೆಗಳಲ್ಲಿ ನೀರು ಪೋಲಾಗುತ್ತಿದೆ. ಮನೆಯಲ್ಲಿ ಬಾವಿ ಹಾಗೂ ಕೊಳವೆ ಬಾವಿ ಇರುವ ಮಂದಿ ನಳ್ಳಿ ನೀರನ್ನು ತೋಟಕ್ಕೆ, ಮಲ್ಲಿಗೆ ಕೃಷಿಗೆ ಬಿಟ್ಟು ನೀರು ಪೋಲು ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪಂಚಾಯಿತಿಗಳಿಗೆ ದೂರು ನೀಡಿದರೂ ಪಂಚಾಯಿತಿಗಳು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಕೆಲ ಪ್ರದೇಶಕ್ಕೆ ನೀರು ಬರುತ್ತಿಲ್ಲ. ನೀರು ಬಿಡುವಲ್ಲಿ ಕೂಡಾ ತಾರತಮ್ಯ ಮಾಡುತ್ತಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

    ಗ್ರಾಪಂಗಳು ಹೈರಾಣು

    ನಿರಂತರ ನೀರು ಬಸಿಯುವಿಕೆಯಿಂದ ಬಹುತೇಕ ಗ್ರಾಪಂ ಪಂಪ್‌ಗಳು ಕೆಟ್ಟು ಹೋಗಿವೆ. ಬೋರ್‌ವೆಲ್‌ಗಳು ಬರಿದಾಗಿದೆ. ಗ್ರಾಮದ ಜನರಿಗೆ ನೀರು ಪೂರೈಸಲು ಪಂಚಾಯಿತಿಗಳು ಹೈರಾಣಾಗಿವೆ. ಬಿಸಿಲ ಬೇಗೆಗೆ ನದಿ ಬತ್ತಿದ್ದರಿಂದ ಈ ಮೂಲವನ್ನು ನಂಬಿದ್ದ ಗ್ರಾಪಂಗಳಿಗೆ ಈ ಬಾರಿ ಬೇಗನೆ ನೀರಿನ ಅಭಾವ ಕಾಡಿದೆ. ಅಂತರ್ಜಲದ ಕುಸಿತ ಕಳವಳಕಾರಿಯಾಗಿದೆ.

    ಹೆಚ್ಚಿದ ಕೊಳವೆ ಬಾವಿ

    ನೀರಿನ ಸಮಸ್ಯೆ ನೀಗಲು ಸಾಕಷ್ಟು ಕಡೆಗಳಲ್ಲಿ ಕೊಳವೆ ಬಾವಿ ಕೊರೆಯುತ್ತಿದ್ದಾರೆ. ಕೆಲವು ಪರವಾನಿಗೆ ಪಡೆದಿದ್ದರೆ ಕೆಲವರು ಪರವಾನಿಗೆ ಇಲ್ಲದೆ ಗುಟ್ಟಾಗಿ ಬೋರ್‌ವೆಲ್ ಹಾಕಿಸುತಿದ್ದಾರೆ. ಮಿತಿ ಮೀರಿದ ಕೊಳವೆ ಬಾವಿಗಳಿಂದ ಬಾವಿಗಳ ಅಂತರ್ಜಲ ಕುಸಿತವಾಗುತ್ತಿದೆ ಎಂದು ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.

    ಎತ್ತರ ಪ್ರದೇಶಕ್ಕೆ ನೀರಿಲ್ಲ

    ಕೆಲವೊಂದು ಗುಡ್ಡ ಪ್ರದೇಶ ಹಾಗೂ ಎತ್ತರದ ಪ್ರದೇಶಗಳಿಗೆ ನಳ್ಳಿ ನೀರು ಬರುತ್ತಿಲ್ಲ. ನೀರಿನ ಪಂಪಿಂಗ್ ಸಾಮರ್ಥ್ಯ ಕಡಿಮೆಯಾಗಿ ಎತ್ತರ ಭಾಗದ ಮನೆಗಳಿಗೆ ನೀರಿಲ್ಲದಂತಾಗಿದೆ. ಟ್ಯಾಂಕರ್ ನೀರು ಕೂಡಾ ವಾರಕ್ಕೆ ಒಂದು ಬಾರಿಯೂ ಬರುತ್ತಿಲ್ಲ. ಹೀಗಾಗಿ ಎತ್ತರ ಭಾಗದ ಮನೆ ಮಂದಿ ನೀರಿಗಾಗಿ ಕಿಮೀ ಗಟ್ಟಲೆ ನಡೆದು ಖಾಸಗಿಯವರಿಂದ ನೀರು ತರಬೇಕಾದದ್ದು ಅನಿವಾರ್ಯ.

    ನೀರಿನ ಸಮಸ್ಯೆ ಹೈರಾಣು ಮಾಡುವಂತೇ ಮಳೆ ಆಗಮನವೂ ದೂರವಾಗುತ್ತಿರುವುದು ಜನರನ್ನು ನಿರಾಶರಾಗಿಸಿದೆ. ನೀರಿಲ್ಲದೇ ಸಾಯುವ ಮುನ್ನ ಮಳೆರಾಯನ ಆಗಮನವಾಗಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ.

    ಕೃಷಿ ಚಟುವಟಿಕೆ ವಿಳಂಬ

    ಏಪ್ರಿಲ್ ತಿಂಗಳು ಕಳೆಯುತ್ತಿದ್ದಂತೆ ಗದ್ದೆ ಹದ ಮಾಡಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕೃಷಿಕರು ಈ ಬಾರಿ ಸುಮ್ಮನಿರಬೇಕಾಗಿದೆ. ಕೃಷಿ ಭೂಮಿ ಸಂಪೂರ್ಣ ಸುಟ್ಟು ಹೋಗಿದೆ. ಅಡಕೆ, ಬಾಳೆ, ತೆಂಗು ಸಹಿತ ಇತರ ಕೃಷಿಗಳು ಸಂಪೂರ್ಣ ನೆಲಕಚ್ಚಿವೆ. ಗದ್ದೆಗಳಿಗೆ ನೀರಿನ ವ್ಯವಸ್ಥೆ ಇಲ್ಲದೆ ಕೃಷಿ ಕಾರ್ಯ ವಿಳಂಬವಾಗಿದೆ. ಕೃಷಿಕರು ಮಳೆಗೆ ಕಾಯವುದೊಂದೇ ದಾರಿ.

    ಇಷ್ಟು ವರ್ಷಗಳಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಆದರೆ ಈ ಬಾರಿ ಹಿಂದೆಂದೂ ಕಾಣದ ನೀರಿನ ಸಮಸ್ಯೆ ಕಾಡುತ್ತಿದೆ. ಪಂಚಾಯಿತಿ ನಳ್ಳಿ ನೀರಿನ ಸಂಪರ್ಕವಿದ್ದರೂ ನೀರು ಬರುವುದು ಅಪರೂಪ. ನಿತ್ಯದ ಬಳಕೆಗೆ ನೀರಿಲ್ಲದೆ ಪರದಾಟ ನಡೆಸುವ ಸ್ಥಿತಿ ಎದುರಾಗಿದೆ.

    -ಪ್ರಮೀಳಾ ಸಾಲ್ಯಾನ್, ನಿವಾಸಿ

    ವಾರಕ್ಕೆ ಒಂದು ಬಾರಿ ನಳ್ಳಿಯಲ್ಲಿ ನೀರು ಬರುವುದೂ ಅಪರೂಪ. ಇಂತಹ ಪರಿಸ್ಥಿತಿ ಹಲವು ಗ್ರಾಮದಲ್ಲಿದೆ. ನೀರಿನ ಸಮಸ್ಯೆಗೆ ಪರಿಹಾರ ಏನು ಎಂಬುವುದು ತಿಳಿದಿಲ್ಲ.ಮಳೆ ಬಂದರೆ ಸಾಕಿತ್ತು.

    -ದಿವಾಕರ್, ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts