More

    ಇನ್ನೂ ನಡೆದಿಲ್ಲ ಮಳೆಗಾಲಕ್ಕೆ ಸಿದ್ಧತೆ

    -ಹರಿಪ್ರಸಾದ್ ನಂದಳಿಕೆ, ಕಾರ್ಕಳ

    ಚುನಾವಣೆಯಲ್ಲೇ ವ್ಯಸ್ತರಾಗಿದ್ದ ಅಧಿಕಾರಿಗಳು, ಗ್ರಾಪಂ ಹಾಗೂ ಪುರಸಭೆಯ ಸದಸ್ಯರು ಮಳೆಗಾಲದ ಸಿದ್ಧತೆಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಮುಂಗಾರು ಬರುವ ಮೊದಲೆ ಚರಂಡಿಗಳ ಹೂಳೆತ್ತುವ ಕಾರ್ಯ ನಡೆಯಬೇಕಾಗಿದ್ದು, ಯಾವ ಸ್ಥಳೀಯಾಡಳಿತ ಅಧಿಕಾರಿಯೂ ಈ ಬಗ್ಗೆ ಗಮನ ಹರಿಸಿದಂತಿಲ್ಲ.

    ಕಾರ್ಕಳ ತಾಲೂಕಿನಾದ್ಯಂತ ಚರಂಡಿಗಳು ತ್ಯಾಜ್ಯಗಳಿಂದ ತುಂಬಿಕೊಂಡಿವೆ. ಹೂಳು ತುಂಬಿ, ಹುಲ್ಲು ಪೊದೆಗಳು ಬೆಳೆದು ಚರಂಡಿಯೇ ಮುಚ್ಚಿದಂತಿದೆ. ಬಹುತೇಕ ಭಾಗದಲ್ಲಿ ರಸ್ತೆಯ ಕಾಮಗಾರಿ ನಡೆದು ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಮಣ್ಣು ಹಾಕಿದ ಪರಿಣಾಮ ಚರಂಡಿಯೇ ಮಾಯವಾಗಿದೆ. ಕೆಲವು ಕಡೆಗಳಲ್ಲಿ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ಮಣ್ಣಿನಿಂದ ಚರಂಡಿಯೇ ತುಂಬಿ ಹೋಗಿದೆ. ಹೀಗಾಗಿ ಈ ಬಾರಿ ಮಳೆನೀರು ಹರಿದು ಹೋಗಲು ಚರಂಡಿಯೇ ಇಲ್ಲದ ಪರಿಸ್ಥಿತಿ ಬಹುತೇಕ ಗ್ರಾಪಂ ವ್ಯಾಪ್ತಿಯಲ್ಲಿದೆ. ತಾಲೂಕಿನ 34 ಗ್ರಾಪಂನಲ್ಲೂ ಮಳೆ ನೀರು ಹರಿದು ಹೋಗುವ ಸರಿಯಾದ ಚರಂಡಿ ವ್ಯವಸ್ಥೆಗಳಿಲ್ಲ. ಇದ್ದರೂ ಚರಂಡಿಯ ಹೂಳು ತೆಗೆಯುವ ಕಾರ್ಯಕ್ಕೆ ಇನ್ನೂ ಮುಹೂರ್ತ ಫಿಕ್ಸ್ ಆದಂತಿಲ್ಲ.

    ವಾಡಿಕೆಯಂತೆ ಪೂರ್ಣ ಪ್ರಮಾಣದ ಮುಂಗಾರು ಮಳೆ ಆರಂಭಗೊಳ್ಳಲು ಇನ್ನೂ ಕೆಲ ದಿನ ಮಾತ್ರ ಬಾಕಿ ಇದೆ. ಕೆಲವೊಮ್ಮೆ ಅವಧಿಗೂ ಮುನ್ನ ಮಳೆ ಆರಂಭವಾಗುವುದುಂಟು. ಹೀಗಾಗಿ ಮಳೆಗಾಲದ ಸಿದ್ಧತೆಗಳು ಸಾಕಷ್ಟು ಮುಂಚಿತವಾಗಿ ನಡೆಯಬೇಕು. ಆದರೆ ಈ ಬಾರಿ ಚುನಾವಣೆ ಗುಂಗಿನಲ್ಲಿರುವ ಅಧಿಕಾರಿಗಳು ಮಳೆ ನೀರು ಹರಿದು ಹೋಗಲು ಚರಂಡಿ ಸಿದ್ಧಗೊಳಿಸುವಲ್ಲಿ ಗಮನಹರಿಸಿದಂತಿಲ್ಲ.

    ಕೃತಕ ನೆರೆ

    ಕಳೆದ ಕೆಲ ತಿಂಗಳಿನಿಂದ ಪ್ರಖರ ಬಿಸಿಲಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಾರ್ಕಳ ಭಾಗದಲ್ಲಂತೂ ಮಳೆ ಆರಂಭವಾಯಿತೆಂದರೆ ಭರ್ಜರಿಯಾಗಿ ಸುರಿಯುತ್ತದೆ. ಇಲ್ಲಿ ಒಂದೆರಡು ತಾಸು ಮಳೆ ಸುರಿದರೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಸಾಮಾನ್ಯರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಚರಂಡಿಗಳಲ್ಲಿ ಹೂಳು ತುಂಬಿ ಅಲ್ಪ ಮಳೆ ಬಿದ್ದರೂ ಪ್ರವಾಹದ ರೀತಿಯಲ್ಲಿ ಮಳೆ ನೀರು ಹರಿದು ಕೃತಕ ನೆರೆ ಉಂಟಾಗುತ್ತದೆ.

    ವಾಹನಗಳು ಓಡಾಡುವ ಸಂದರ್ಭ ರಸ್ತೆಯಲ್ಲಿ ಹರಿಯುವ ಕೆಸರು ನೀರು ಮೈಮೇಲೆ ರಾಚುತ್ತದೆ. ಮಳೆಗಾಲಕ್ಕೂ ಮುನ್ನ ಚರಂಡಿಗಳ ಹೂಳು ತೆಗೆದರೆ ಈ ರೀತಿಯಾದ ಸಮಸ್ಯೆಗಳು ಬರುವುದಿಲ್ಲ ಎನ್ನುವುದು ಸಾರ್ವಜನಿಕರ ಮಾತು.

    ಇಲ್ಲ ಚರಂಡಿ ವ್ಯವಸ್ಥೆ

    ಮಳೆಗಾಲಕ್ಕೂ ಮೊದಲೇ ಚರಂಡಿ ಹೂಳು ತೆರವುಗೊಳಿಸಬೇಕು. ಆದರೆ, ಮಳೆಗಾಲದಲ್ಲಿ ಹೂಳು ತೆರವು ಎಂಬ ಶಾಸ್ತ್ರ ಪ್ರತಿ ವರ್ಷ ಮಾಡುವುದರಿಂದ ಅನಾಹುತ ಹೆಚ್ಚೆಚ್ಚು ಆಗುತ್ತಿರುತ್ತದೆ. ಮೊದಲ ಮಳೆಗೆ ಚರಂಡಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯಲ್ಲೇ ತ್ಯಾಜ್ಯರಾಶಿ ಬೀಳುವುದು ಇಲ್ಲಿ ಸಾಮಾನ್ಯ. ಗ್ರಾಪಂ ವ್ಯಾಪ್ತಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಮಳೆ ನೀರು ನೇರವಾಗಿ ರಸ್ತೆ ಬದಿಯ ಮನೆಯಂಗಳ ಸೇರುತ್ತದೆ.

    ಕಾಂಕ್ರೀಟ್ ರಸ್ತೆಗಳು ಮಳೆ ನೀರನ್ನು ಹೀರಿಕೊಳ್ಳುತ್ತಿಲ್ಲ. ನೀರಿನ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಇಲ್ಲಿನ ನೆಲಕ್ಕಿಲ.್ಲ ನೀರಿನ ಹರಿವಿನ ನೈಸರ್ಗಿಕ ಜಾಡು ತಪ್ಪಿ ಹೋಗಿದೆ. ಮಳೆ ನೀರು ಚರಂಡಿಯಿಂದ ಮೇಲೆದ್ದು ರಸ್ತೆಯಲ್ಲಿ ಹರಿದು ಅನಾಹುತ ಸೃಷ್ಟಿಸುತ್ತಿದೆ. ಕೆಲವೊಂದು ಭಾಗದಲ್ಲಿ ಚರಂಡಿಯೇ ಮಾಯವಾಗಿ ಕೃತಕ ನೆರೆ ಉಂಟಾಗುತ್ತದೆ. ಪ್ರತಿ ವರ್ಷ ಪಂಚಾಯಿತಿಗಳು ಚರಂಡಿ ಹೂಳು ತೆಗೆಯುವ ಕಾರ್ಯ ಮಳೆಗಾಲ ಆರಂಭದ ಬಳಿಕ ಶುರು ಮಾಡುತ್ತವೆ. ಕೇವಲ ಕೆಲವೇ ಕಿ.ಮೀ. ಚರಂಡಿ ನಿರ್ಮಿಸಿ ಬಳಿಕ ಸುಮ್ಮನಾಗುತ್ತಾರೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಚರಂಡಿ ಸಮಸ್ಯೆಗೆ ಮುಕ್ತಿ ದೊರಕಿಲ್ಲ.

    ಮಳೆಗಾಲ ಆರಂಭಗೊಳ್ಳುವ ಮೊದಲು ತಾಲೂಕಿನಾದ್ಯಂತ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಆಗಬೇಕಾಗಿದೆ. ಇದ್ದ ಚರಂಡಿಯ ಮಣ್ಣು, ಹೂಳು, ತ್ಯಾಜ್ಯ ತೆರವು ಮಾಡುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

    ಈ ಬಾರಿ ಸಾಧಾರಣ ಮಳೆ ಸುರಿದರೆ ಸಾಕು ಕೃತಕ ನೆರೆ ಉಂಟಾಗುವುದರಲ್ಲಿ ಸಂದೇಹವಿಲ್ಲ. ಗ್ರಾಮೀಣ ಭಾಗದಿಂದ ಹಿಡಿದು ಪಟ್ಟಣ ನಗರ ಪ್ರದೇಶಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲ. ಮಳೆ ನೀರು ಹರಿದು ಹೋಗಲು ಚರಂಡಿ ಇಲ್ಲದೆ ರಸ್ತೆಯಲ್ಲಿ ಹರಿಯುವುದರಿಂದ ಸಮಸ್ಯೆ ಉಂಟಾಗುತ್ತದೆ.

    -ಪ್ರತಿಭಾ ಪೂಜಾರಿ, ಗ್ರಾಮಸ್ಥೆ

    ಮಳೆಗಾಲ ಪೂರ್ವದ ಕಾಮಗಾರಿಗೆ ಸಂಬಂಧಿಸಿ ಸದ್ಯದಲ್ಲಿ ಪ್ರಕ್ರಿಯೆ ಆರಂಭಿಸುತ್ತೇವೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಪುರಸಭಾ ವ್ಯಾಪ್ತಿಯ ಚರಂಡಿಗಳ ಹೂಳೆತ್ತುವ ಕಾರ್ಯ ಶೀಘ್ರ ನಡೆಯಲಿದೆ.

    -ರೂಪಾ ಟಿ.ಶೆಟ್ಟಿ, ಮುಖ್ಯಾಧಿಕಾರಿ, ಕಾರ್ಕಳ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts