More

    ಏತ ನೀರಾವರಿಯಲ್ಲೂ ನೀರಿಲ್ಲ

    -ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ

    ಒಂದು ತಿಂಗಳಿಂದ ಸೌಪರ್ಣಿಕಾ ಏತ ನೀರಾವರಿ ಯೋಜನೆ ಕಾಲುವೆಯಲ್ಲಿ ನೀರು ಹರಿದಿಲ್ಲ. ಸರ್ಕಾರ ಏತ ನೀರಾವರಿಗಾಗಿ ಖರ್ಚು ಮಾಡಿದ ಮೊತ್ತ ಬರೋಬ್ಬರಿ 95 ಕೋಟಿ ರೂ. ಕಾಮಗಾರಿ ಗುಣಮಟ್ಟ ಕೊರತೆಗೆ ಮತ್ತೊಂದು ಕೋಟಿ. ಆದರೂ ನೀರು ಹರಿಯುವ ಚಾನಲ್ ಒಣಗಿ, ಚೆಕ್‌ಡ್ಯಾಮ್ ನೀರಿನ ಸಂಗ್ರಹವನ್ನು ಕೊಡಪಾನದಲ್ಲಿ ಅಳೆಯಬಹುದು.

    ಕಿಂಡಿಅಣೆಕಟ್ಟು ಕಟ್ಟಬೇಕಿದ್ದರೆ ಹರಿವೆಷ್ಟು, ಹರಿವಿನ ತಾಕತ್ತು ಎಲ್ಲಿಯವರಗೆ, ಅಣೆಕಟ್ಟೆ ನೀರು ಸಂಗ್ರಹ ಪ್ರಮಾಣವೆಷ್ಟು, ಕಟ್ಟೆ ಎತ್ತರ, ಚಾನಲ್ ಮೂಲಕ ಹೊರ ಹೋಗುವ ನೀರಿನ ಪ್ರಮಾಣ, ನೀರಿನ ವಿಲೇವಾರಿ ಕುರಿತು ಅಧ್ಯಯನ ನಡೆಸಿದ್ದರೆ ಇಂದು ಚಾನಲ್ ಒಣಗುತ್ತಿರಲಿಲ್ಲ. ಅಣೆಕಟ್ಟೆ ಕಟ್ಟಬೇಕಿದ್ದರೆ ಸ್ಥಳೀಯ ರೈತರ, ಹಿರಿಯರ, ತಜ್ಞರ ಜತೆ ಚರ್ಚಿಸಿ, ಎಲ್ಲ ಸಾಧ್ಯತೆಗಳನ್ನು ಅಳೆದೂ ಸುರಿದೂ ಕಟ್ಟಿದ್ದರೆ ಏತ ನೀರಾವರಿ ಜನರ ಸಮಸ್ಯೆಯಾಗಿ ಕಾಡುತ್ತಿರಲಿಲ್ಲ.

    ಸೌಪರ್ಣಿಕಾ ನದಿಗೆ ಅಣೆಕಟ್ಟೆಯಿಂದ ನದಿಯ ಹರಿವು ನಿಲ್ಲಿಸಿದ್ದರ ಪರಿಣಾಮ ಮಾವಿನಗುಳಿ ಪರಿಸರದ ಜನರಿಗೆ ಕುಡಿಯುವ ನೀರಿಗೂ ತತ್ವಾರ. ನದಿ ಪಕ್ಕದ ಜನರು ಕುಡಿಯುವ ನೀರು ಕೊಡಿ ಎಂದು ಗ್ರಾಮ ಪಂಚಾಯಿತಿ ಮುಂದೆ ಬೇಡುವ ಪರೀಸ್ಥಿತಿ. ಸೌಪರ್ಣಿಕಾ ಏತನೀರಾವರಿ ನಂತರ ಆಗುತ್ತಿರುವ ಪರಿಣಾಮ ಎಲ್ಲರಿಗೂ ಗೊತ್ತಿರೋದೇ ಆಗಿದ್ದರೂ ಸೌಪರ್ಣಿಕಾ ನದಿ ಬಲದಂಡೆ ಯೋಜನೆ ಮೂಲಕ ಬೈಂದೂರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸುವ ಜನಪ್ರತಿನಿಧಿಗಳ ಮೌಢ್ಯಕ್ಕೆ ಏನೆನ್ನಬೇಕು? ಕೊಡಚಾದ್ರಿಯಲ್ಲಿ ಹುಟ್ಟಿ ಕೊಲ್ಲೂರು ಕ್ಷೇತ್ರದಿಂದ ಅರಬ್ಬಿ ಸಮುದ್ರ ಸೇರುವ ಸೌಪರ್ಣಿಕಾ ನದಿ ಏಪ್ರಿಲ್ ನಂತರ ಹರಿವು ತಗ್ಗಿಸಿಕೊಂಡು ಹೊಳೆ ನೀರು ಬಿಸಿಯಾಗಿ, ತ್ಯಾಜ್ಯದಿಂದ ಕಲುಷಿತವಾಗಿ ಜಲಚರಗಳು ಸಾಯುವುದು ಮಾಮೂಲಾಗಿದೆ. ಹಾಗಿದ್ದರೂ ಸೌಪರ್ಣಿಕಾ ಬಲದಂಡೆ ಯೋಜನೆ ಆರಂಭಕ್ಕೆ ಒತ್ತಾಯಿಸುತ್ತಿರುವುದು ಅಚ್ಚರಿಯಲ್ಲದೆ ಮತ್ತೇನು?

    ಕೃಷಿಕರಿಗಿಲ್ಲ ನೀರು

    ಮಾವಿನಗುಳಿ ಚಿಕ್ಕ ಡ್ಯಾಮ್ ಮೂಲಕ ವಿತರಣಾ ಕೇಂದ್ರದಿಂದ ಚಾನಲ್‌ಗೆ ನೀರು ಹರಿಸಲಾಗುತ್ತದೆ. ಕರ್ನಾಟಕ ನೀರಾವರಿ ನಿಗಮ ಸಿದ್ದಾಪುರ ವಲಯ ವಾರಾಹಿ ನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದು, ಕಳೆದ 8 ವರ್ಷದಿಂದ ಏತ ನೀರಾವರಿ ಮೂಲಕ ನೀರು ವಿತರಣೆ ಮಾಡಲಾಗುತ್ತದೆ. ನೀರು ವಿತರಣಾ ಕೇಂದ್ರದಲ್ಲಿ 2300 ಕಿಲೋವ್ಯಾಟ್ ಸಾಮರ್ಥ್ಯದ ಒಟ್ಟು 4 ಮೋಟರ್ ಅಳವಡಿಸಲಾಗಿದೆ. ಡೈವರ್ಶನ್ ಉದ್ದ ಒಟ್ಟು 80 ಮೀ. ನೀರಿನ ಹರಿವಿನ ಸಾಮರ್ಥ್ಯ 3.15 ಕ್ಯೂಮೆಕ್ಸ್. ನೂಜಾಡಿ, ಕುಂದಬಾರಂದಾಡಿ, ವಂಡ್ಸೆ, ಆಲೂರು, ತಾರೀಬೈರು, ಕೆಂಬೈಲು, ಕಡ್ಕೆ, ಚಿಕ್ಕಳ್ಳಿ, ಹರ್ಕೂರು, ಜಡ್ಡಾಡಿ, ಕೋಣ್ಕಿ, ಬಡಾಕೆರೆ, ಹಕ್ಲಾಡಿ, ನಾರ್ಕಳಿ ಗ್ರಾಮ ಫಲಾನುಭವಿ ಪಟ್ಟಿಯಲ್ಲಿದ್ದು, ಕೃಷಿ ಉದ್ದೇಶಕ್ಕಾಗಿ ಯೋಜನೆ ಅನುಷ್ಠಾನ ಮಾಡಿದ್ದು, ಕೃಷಿಕರೇ ನೀರಿಗಾಗಿ ಬಾಯಿ ಬಡಿದುಕೊಳ್ಳುವ ಸ್ಥಿತಿ ಬಂದಿದೆ.

    ಪೋಲಾಗಿದ್ದೇ ಹೆಚ್ಚು

    ಆಲೂರು ಮಾವಿನಗುಳಿ ಸಮೀಪ ಚೆಕ್‌ಡ್ಯಾಮ್ ನಿರ್ಮಿಸಿ, ಅಲ್ಲಿಂದ ಚಾನಲ್ಲಿಂದ ನಾಡಾ, ಆಲೂರು, ಹಕ್ಲಾಡಿ ಗ್ರಾಮಗಳಿಗೆ ನೀರು ಹರಿಸಲಾಗುತ್ತಿದೆ. ನದಿ ನೀರು ಬಳಕೆಗಿಂತ ವೇಸ್ಟ್ ಆಗಿದ್ದೇ ಹೆಚ್ಚು. ಕಳಪೆ ಕಾಮಗಾರಿಗೆ ಆಲೂರು ಕಲ್ಲು ಕ್ವಾರಿಯಲ್ಲಿ ನೀರು ನಿಂತು ಇಡೀ ಆಲೂರು ಮುಳಗಡೆ ಪ್ರದೇಶದಂತೆ ಆಗಿತ್ತು. ಮತ್ತೆ ಪೈಪ್‌ಲೈನ್ ಕಾಮಗಾರಿಗೆ ಅನುದಾನ ಖರ್ಚು ಮಾಡಲಾಯಿತು. ಕೊಲ್ಲೂರು ಕಾಶಿತೀರ್ಥ ಬಳಿ ಕಿಂಡಿ ಅಣೆಕಟ್ಟೆ ನಿರ್ಮಾಣ ಹೀಗೆ ಸೌಪರ್ಣಿಕಾ ನದಿಗೆ ಕಟ್ಟೆಕಟ್ಟಿ ಹರಿಯುವ ನೀರು ನಿಲ್ಲಿಸಿದ್ದರಿಂದ ಮುಂದಿನ ದಿನ ಸೌಪರ್ಣಿಕಾ ಹರಿವು ನಿಲ್ಲಿಸಿದರೆ ಅಚ್ಚರಿಯಲ್ಲ.

    ಕೃಷಿಕರೇನಂತಾರೆ?

    ಕೃಷಿ ಉದ್ದೇಶಕ್ಕಾಗಿಯೇ ಸೌಪರ್ಣಿಕಾ ಏತನೀರಾವರಿ ಆರಂಭಿಸಲಾಗುತ್ತಿದೆ ಎಂದು ನಂಬಿಸಲಾಗಿದ್ದು, ನಾವೂ ನಂಬಿದ್ದೇವೆ. ಕಾಮಗಾರಿ ಪೂರ್ಣಗೊಂಡು ಚಾನಲ್ ನೀರು ಹರಿಸಲು ಆರಂಭಿಸಿದ ನಂತರ ಕೃಷಿ ಭೂಮಿಗೆ ನೀರು ಹರಿದಿದ್ದಕ್ಕಿಂತ ಕಲ್ಲುಕೋರೆ ಹೊಂಡದಲ್ಲಿ ವೇಸ್ಟಾಗಿದ್ದೇ ಹೆಚ್ಚು. ಏತನೀರಾವರಿ ಸಮಸ್ಯೆಗೆ ಯಾರೊಬ್ಬರೂ ನೆರವಿಗೆ ಬರದಿದ್ದಾಗ ವಿಜಯವಾಣಿ ರೈತರ ದ್ವನಿಯಾಯಿತು. ಚಾನಲ್‌ನಲ್ಲಿ ನೀರು ಹರಿಸಿದ್ದಷ್ಟೇ ಅಲ್ಲದೆ ಜಿಪಂ ಸಿಇಒ, ಎಸಿ ಸ್ಥಳಕ್ಕೆ ಬರುವಂತೆ ಮಾಡಿ, ಏತನೀರಾವರಿ ಯೋಜನೆ ಕರ್ಮಕಾಂಡ ಕಣ್ಣಾರೆ ಕಾಣುವಂತೆ ಮಾಡಿದ್ದಲ್ಲದೆ, ಅಂದಿನ ಸಿಇಒ ಪ್ರಿಯಾಂಕ ಮೇರಿ ಫರ್ನಾಂಡಿಸ್ ವಾರಾಹಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತುರ್ತು ದುರಸ್ತಿಗೆ 10 ಲಕ್ಷ ರೂ. ನೀಡಿದ್ದರು. ಅಂದಿನಿಂದ ಇಂದಿನವರೆಗೆ ದುರಸ್ತಿ ಅಂತ ಅನುದಾನ ಬರುತ್ತೆ, ನೀರು ವೇಸ್ಟ್ ಆಗೋದು ತಪ್ಪೋದಿಲ್ಲ. ಏತ ನೀರು ನಂಬಿ ನಾವು ಕೃಷಿ ಮಾಡೋದೂ ಇಲ್ಲ ಎಂದು ನಾಡಾ, ಹಕ್ಲಾಡಿ ಕೃಷಿಕರು ಹೇಳುತ್ತಾರೆ.

    ಡಿಸಿ ಫೋನ್ ಎತ್ತಲ್ಲ…

    ಉಡುಪಿ ಜಿಲ್ಲಾಧಿಕಾರಿಗೆ ಕರೆ ಸ್ವೀಕರಿಸುವಷ್ಟು ಸೌಜನ್ಯವೂ ಇಲ್ಲ. ಮೊಬೈಲ್ ಇಲ್ಲದ ಕಾಲದಲ್ಲಿ ಕೂಡ ಇಲ್ಲಿನ ಡಿಸಿ ಆಗಿದ್ದವರು ದೂರವಾಣಿ ಕರೆ ಸ್ವೀಕರಿಸುತ್ತಿದ್ದರು. ಕರೆ ಸ್ವೀಕರಿಸಲಾಗದಿದ್ದರೆ, ತಿರುಗಿ ಕರೆ ಮಾಡುತ್ತಿದ್ದರು. ಮೊಬೈಲ್ ಬಂದ ನಂತರ ಜಿಲ್ಲಾಧಿಕಾರಿ ಮೀಟಿಂಗ್ ಅಥವಾ ಕೆಲಸದ ಒತ್ತಡದಲ್ಲಿದ್ದು, ಕಾಲ್ ಎತ್ತಲಾಗದಿದ್ದರೆ, ಕಾಲ್ ಬ್ಯಾಕ್ ಅಂತ ಮೆಸೇಜ್ ಹಾಕುತ್ತಿದ್ದರು. ಈಗಿರುವ ಡಿಸಿ ಮೆಸೇಜ್ ಹಾಕುವುದಿರಲಿ ವಾಟ್ಸಾೃಪ್ ಕೂಡ ನೋಡೋದಿಲ್ಲ. ಜಿಲ್ಲೆಯಲ್ಲಿ ಏರುತ್ತಿರುವ ತಾಪಮಾನ, ಕುಡಿಯುವ ನೀರಿನ ಸಮಸ್ಯೆ, ಬತ್ತಿಹೋದ ಸೌಪರ್ಣಿಕಾ ಏತನೀರಾವರಿ ಚಾನಲ್, ಮಳೆಗಾಲದ ಸಿದ್ಧತೆ ಬಗ್ಗೆ ಉತ್ತರ ಕೊಡಬೇಕಾದ ಡಿಸಿ ಕರೆ ಸ್ವೀಕರಿಸದಿದ್ದರೆ ಹೇಗೆ? ಎಡಿಸಿಗೆ ಕೆರೆ ಮಾಡಿದರೆ ಡಿಸಿ ಕೇಳಿ ಎನ್ನುವ ಉತ್ತರ ಬರುತ್ತದೆ. ತಹಸೀಲ್ದಾರ್ ಕೇಳಿದರೆ ಮಾಹಿತಿ ಹಕ್ಕಲ್ಲಿ ಕೇಳಿ ಅಂತಾರೆ. ಮೈನಿಂಗ್ ಅಧಿಕಾರಿಗಳು ಕರೆ ಸ್ವೀಕರಿಸುವುದೇ ಇಲ್ಲ. ಜನರು ತಮ್ಮ ಸಮಸ್ಯೆ ಯಾರಿಗೆ ಹೇಳಬೇಕು? ಉಡುಪಿ ಡಿಸಿ ಜನಸಾಮಾನ್ಯರ ಡಿಸಿಯಾ ಜನಪ್ರತಿನಿಧಿಗಳ ಡಿಸಿಯಾ ಎನ್ನುವ ಪ್ರಶ್ನೆ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts