-ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಕರಾವಳಿ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದಿಂದ ಹರಿದು ಬರುವ 50ಕ್ಕೂ ಹೆಚ್ಚು ಜೀವ ನದಿಗಳ ಪ್ರವಾಹದಿಂದ ನದಿ ತೀರದ ಭೂಮಿ ನದಿಯ ಒಡಲು ಸೇರಿ ಮಣ್ಣು ನಾಶವಾಗುತ್ತಿದೆ. ಕಡಲ್ಕೊರೆತದಂತೆ ನದಿ ಕೊರೆತದ ಸಮಸ್ಯೆ ವ್ಯವಸ್ಥೆಯ ಗಮನಕ್ಕೆ ಬಾರದೆ ಕೃಷಿಕರಿಗೆ, ನದಿ ತೀರ ವಾಸಿಗಳಿಗೆ ತೊಂದರೆಯಾಗಿದೆ. ಕಳೆದ ಹಲವಾರು ವರ್ಷದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ಭಾಗದ 3 ನದಿಗಳಾದ ಸೀತಾ, ಸ್ವರ್ಣಾ ಮತ್ತು ಮಡಿಸಾಲು ನದಿಗಳಿಂದ ನದಿ ತೀರದ ಕೃಷಿ ಭೂಮಿ, ತೆಂಗಿನ ತೋಟ ನೀರುಪಾಲಾಗುತ್ತಿದೆ.
ಸೀತಾ ನದಿಯ ನೀಲಾವರ ಕಿಂಡಿ ಅಣೆಕಟ್ಟು ಮತ್ತು ನೀಲಾವರ ಕೂರಾಡಿ ಸೇತುವೆ ನಡುವೆ ತಿರುವು ಇರುವ ನದಿ ತೀರವಾದ ಬಂಡೀಮಠ, ಕೂರಾಡಿ, ಹನೆಹಳ್ಳಿ, ಬಾವಲಿ ಕುದ್ರು ಪ್ರದೇಶದ ಉತ್ತರ ಭಾಗದ 3 ಕಿ.ಮೀ. ನದಿತೀರ ವರ್ಷದಿಂದ ವರ್ಷಕ್ಕೆ ಸವೆತಕ್ಕೊಳಗಾಗುತ್ತಿದೆ. ಇದರಿಂದ ಬಹಳಷ್ಟು ಕೃಷಿ ಭೂಮಿ ನಾಶವಾಗಿ ಇನ್ನುಳಿದ ತೀರ ಕೂಡಾ ಮಳೆಗಾಲದ ಭಾರಿ ಪ್ರವಾಹಕ್ಕೆ ಕೊಚ್ಚಿ ಹೋಗುವ ಸಾಧ್ಯತೆ ಇದೆ.
ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆಲವು ಭಾಗದಲ್ಲಿ ಕಲ್ಲು ಕಟ್ಟಿ ತಡೆಗೋಡೆ ಕಾಮಗಾರಿ ಮಾಡಿ ಸರ್ಕಾರದ ಬೊಕ್ಕಸ ಖಾಲಿ ಮಾಡಿದ್ದಾರೆ. ಆದರೆ ಸಮಸ್ಯೆ ಇರುವ ತಿರುವಿನ ಜಾಗ ಪರಿಶೀಲನೆ ಮಾಡಿ ನೈಜ ಭೂ ಸವೆತ ಉಂಟಾಗುವಲ್ಲಿ ತಡೆಗೋಡೆ ಮಾಡಿ ಭೂ ಸವೆತ ತಡೆದಿಲ್ಲ. ಈ ವರ್ಷ ಮಳೆಗಾಲಕ್ಕೂ ಮುನ್ನ ಕಾಮಗಾರಿ ವ್ಯವಸ್ಥಿತವಾಗಿ ಪರಿಶೀಲನೆ ನಡೆಸಿ ಯಥೋಚಿತ ಯೋಜನೆ ಕೈಗೆತ್ತಿಕೊಳ್ಳಲು ಸಾಕಷ್ಟು ಸಮಯಾವಕಾಶವಿತ್ತು. ಆದರೆ ಅಧಿಕಾರಿಗಳ ಆಲಸ್ಯದಿಂದ ಇನ್ನೂ ಈ ಬಗ್ಗೆ ಯಾವ ಬೆಳವಣಿಗೆ ನಡೆದಿರುವುದರ ಬಗ್ಗೆ ಮಾಹಿತಿ ಇಲ್ಲ. ತಡವಾಗಿ ಬರುವ ಮಳೆ ರಭಸ ಹೆಚ್ಚು ಎನ್ನುವ ನಂಬಿಕೆ ಇರುವುದರಿಂದ ನದಿ ತೀರ ವಾಸಿಗಳು, ಕೃಷಿಕರು ಭಯದಿಂದಲೇ ಈ ವರ್ಷ ಏನು ಕೊಚ್ಚಿಹೋಗುತ್ತದೋ ಎನ್ನುವ ಆತಂಕದಲ್ಲಿದ್ದಾರೆ.
ಸವೆತ ತಡೆಯುವ ಗಿಡ ನದಿಪಾಲು
ಭತ್ತ, ಕಬ್ಬು , ತೆಂಗು, ತರಕಾರಿ ಬೆಳೆಯುತ್ತಿರುವ ನದಿ ತೀರದ ಪ್ರದೇಶ ಈಗಾಗಲೆ ಕೊಚ್ಚಿ ಹೋಗಿದೆ. ಭೂಮಿಯ ಸವೆತ ತಡೆಯಲು ಕೃಷಿಕರೇ ಮರ ಗಿಡಗಳನ್ನು ಬೆಳೆಸಿದ್ದು, ಅವು ಕೂಡಾ ಕುಸಿದು ಬಿದ್ದು ನದಿ ಪಾಲಾಗಿವೆ.
ನದೀತೀರದಲ್ಲಿ ವಾಸಿಸುವ ನಮಗೆ ಮಾತ್ರ ನದಿಯ ಹರಿವಿನ ಆಳ-ಅಗಲದ ಅರಿವಿರುತ್ತದೆ. ಕಳೆದ ಹಲವಾರು ವರ್ಷದಿಂದ ನದಿ ತಿರುವಿನ ಜಾಗದಲ್ಲಿ ಮಣ್ಣು ಕೊಚ್ಚಿಹೋಗುತ್ತಲೇ ಇದ್ದು ಗಂಭೀರ ಸಮಸ್ಯೆ ಇದೆ. ಸಂಬಂಧಪಟ್ಟವರು ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.
-ಪ್ರಭಾಕರ ಶೆಟ್ಟಿ, ಮಾಜಿ ಹನೆಹಳ್ಳಿ ಗ್ರಾಪಂ ಸದಸ್ಯ
ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಹೊಸದಾಗಿ ಚುನಾಯಿತನಾಗಿದ್ದೇನೆ. ಕ್ಷೇತ್ರದ ಎಲ್ಲ ಭಾಗದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಪರಿಶೀಲನೆ ಮಾಡಿ ನನ್ನ ಅವಧಿಯಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡುತ್ತೇನೆ.
-ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಶಾಸಕ