More

    ಯುಜಿಡಿ, ವಾರಾಹಿ, ರಿಂಗ್ ರೋಡ್: ನೂತನ ಶಾಸಕರ ಮುಂದಿದೆ ಸಾಲುಸಾಲು ಅಭಿವೃದ್ಧಿಯ ಸವಾಲು

    -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವುದಕ್ಕೆ ಮೊದಲ ಆದ್ಯತೆ ನಂತರ ಏನು ಎನ್ನುವ ಪ್ರಶ್ನೆಯೇ ಇಲ್ಲ, ಎಲ್ಲವೂ ಮುಖ್ಯ. ಅತ್ಯವಶ್ಯಕ ಏನು ಎಂಬ ಜನರ ಆಯ್ಕೆಗೆ ಆದ್ಯತೆ ನೀಡುತ್ತೇನೆ ಎಂದು ಕಿರಣ್ ಕುಮಾರ್ ಕೊಡ್ಗಿ ಹೇಳಿಕೊಂಡರೂ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಸಂಘರ್ಷಕ್ಕೆ ಆಸ್ಪದವಿಲ್ಲದೆ ಅಭಿವೃದ್ಧಿ ಕೈಗೊಳ್ಳುವ ಸವಾಲುಗಳ ಬೆಟ್ಟ ಶಾಸಕರ ಮುಂದಿದೆ.

    ಬಿಜೆಪಿ ವಿರೋಧ ಪಕ್ಷದಲ್ಲಿರುವುದರಿಂದ ಅನುದಾನ ತರುವುದು ಅಷ್ಟು ಸುಲಭವಲ್ಲ ಎನ್ನುವ ಅರಿವು ಶಾಸಕರಿಗಿದೆ. ಕುಂದಾಪುರ ಕ್ಷೇತ್ರದ ಅಭಿವೃದ್ಧಿ ಕನಸೂ ಇದೆ. ನಿಕಟಪೂರ್ವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಅಭಿವೃದ್ಧಿ ನಿಂತ ನೀರಲ್ಲ. ಕ್ಷೇತ್ರದ ಅಭಿವೃದ್ಧಿ ಚಲನಶೀಲವಾಗಿರುವಂತೆ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ಎನ್ನುವುದು ಅವರ ಸ್ಪಷ್ಟತೆ.

    ಕೈಗೊಳ್ಳಬೇಕಾದ ಕಾಮಗಾರಿಗಳ ಪಟ್ಟಿಯಲ್ಲಿ ಕೆಲವು ಹಳೆಯದಾದರೆ, ಮತ್ತೆ ಕೆಲವು ಹೊಸತರ ಸೇರ್ಪಡೆ. 52 ಕೋಟಿ ರೂ. ವೆಚ್ಚದ ಪುರಸಭೆ ಒಳಚರಂಡಿ ಕಾಮಗಾರಿ ಆರಂಭವಾಗಿ ದಶಕ ಕಳೆದರೂ ಸುಖಾಂತ್ಯ ಕಂಡಿಲ್ಲ. 24 ಕೋಟಿ ರೂ. ವೆಚ್ಚದ ಸ್ವಜಲಧಾರೆಯದ್ದೂ ಆಮೆ ವೇಗ. ಇಕ್ಕಟ್ಟಿನ ರಸ್ತೆಗಳ ನಗರ ಸುಂದರೀಕರಣ, ಮೂರು ದಶಕ ಪೂರೈಸಿದರೂ ವಾತ ಹಿಡಿದ ವಾರಾಹಿ, ರಿಂಗ್ ರಸ್ತೆ, ಕುಂದಾಪ್ರ ಕನ್ನಡ ಅಧ್ಯಯನ ಪೀಠ, ಕೋಡಿ ಕನ್ಯಾನ ಸೇತುವೆ, ಕಡಲ ಕೊರೆತ, ಅತಿವೃಷ್ಟಿ-ಅನಾವೃಷ್ಟಿ ವರಾತ, ಪುರಭವನ ಹೀಗೆ ಬೇಡಿಕೆಗಳ ಪಟ್ಟಿಗೆ ಕುಂದಾಪುರ ಜಿಲ್ಲಾ ಹೋರಾಟವೂ ಸೇರಿದೆ.

    ಸಂಘರ್ಷಕ್ಕೆ ಅವಕಾಶ ಮಾಡಿಕೊಡದೆ ಕ್ಷೇತ್ರದ ಅಭಿವೃದ್ಧಿ ಜತೆ ಸಾಮಾಜಿಕ ನ್ಯಾಯ ಕೊಡುವ ಪ್ರಯತ್ನ ಮಾಡಬೇಕಿದೆ. ಈಜು ಕೊಳ, ಒಳಾಂಗಣ ಕ್ರೀಡಾಂಗಣ ಸಹಿತ ಕ್ರೀಡಾ ಸಂಕೀರ್ಣ ಆಗಬೇಕು. ಕುಂದಾಪುರ ಬೆಳೆಯುತ್ತಿದ್ದು, ಕೋಟೇಶ್ವರ ತನಕ ವಿಸ್ತರಿಸುವ ಹೊಸಕನಸುಗಳ ಮೂಟೆಯೂ ಇದೆ.

    ಕುಂದಾಪುರ ರಿಂಗ್ ರಸ್ತೆ, ಗಂಗೊಳ್ಳಿ, ಹಂಗಾರಕಟ್ಟೆ ಸೇತುವೆ, ವಾರಾಹಿ ಯೋಜನೆ ಪೂರ್ಣಗೊಳಿಸುವುದು, ಬಲದಂಡೆ ಯೋಜನೆ, ನೂತನ ಪುರಭವನ ನಿರ್ಮಾಣ, ಕುಂದಾಪುರ ನಗರ ವಿಸ್ತರಣೆ, ಪ್ರವಾಸೋದ್ಯಮ ಮುಂತಾದುವುಗಳಿಗೆ ಆದ್ಯತೆ ನೀಡುವುದಕ್ಕೆ ಆಡಳಿತ ಪಕ್ಷ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ನೋಡಬೇಕಿದೆ.

    ಪ್ರವಾಸೋದ್ಯಮಕ್ಕೆ ಸೇತುವೆ ಅನುಕೂಲ

    ಡೀಮ್ಡ್ ಫಾರೆಸ್ಟ್ ನಿಯಮ ಸರಳೀಕರಣ ಆಗಿದ್ದು, ಗೊಂದಲವಿದ್ದ ಕಡೆ ಕಂದಾಯ ಮತ್ತು ಅರಣ್ಯ ಇಲಾಖೆ ಮೂಲಕ ಜಂಟಿ ಸರ್ವೇ ಆಗಬೇಕು. ಮೀನುಗಾರರ ಬೇಡಿಕೆಯಂತೆ ಯೋಜನೆ ರೂಪಿಸಿ ಕೋಡಿ ಕನ್ಯಾನದಲ್ಲಿ ಮತ್ತು ಹಂಗಾರಕಟ್ಟೆ ಕೋಡಿ ಬೇಂಗ್ರೆ ಮಧ್ಯೆ ಸೇತುವೆ ನಿರ್ಮಾಣವಾದರೆ ಅನುಕೂಲ. ಈ ಸೇತುವೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಯುಜಿಡಿ ಕಾಮಗಾರಿ ವೆಟ್‌ವೆಲ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದ್ದು, ಅವರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಪೂರ್ಣಗೊಳಿಸಬೇಕು.

    ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕಾಂಡ್ಲಾ ಬೋಟಿಂಗ್, ಕಯಾಕಿಂಗ್ ಬಗ್ಗೆ ಚಿಂತನೆ ನಡೆಯುತ್ತಿದ್ದು, ಸೌಭಾಗ್ಯ ಸಂಜೀವಿನಿ, ಹಾಲಾಡಿ ರೂಪಿಸಿದ್ದ ರಿಂಗ್ ರಸ್ತೆ ವಿಸ್ತರಣೆ, ಗಂಗೊಳ್ಳಿ ಸೇತುವೆ ಯೋಜನೆ ಪೂರೈಕೆ ಕನಸು ಇದೆ. ಕುಂದಗನ್ನಡ ಅಧ್ಯಯನ ಪೀಠ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಸಂಸದರೊಂದಿಗೆ ಚರ್ಚಿಸಿ, ರೂಪುರೇಷೆ ಸಿದ್ಧಪಡಿಸಲಾಗುವುದು. ಸೌಭಾಗ್ಯ ಸಂಜೀವಿನಿ ಯೋಜನೆ ತಂದೆಯ ಕನಸಾಗಿದ್ದು, ಅನುಷ್ಠಾನಕ್ಕೆ ಪ್ರಯತ್ನಿಸುತ್ತೇನೆ. ಪಾಂಡೇಶ್ವರ ಬಳಿ 200 ಕೋಟಿ ರೂ. ವೆಚ್ಚದಲ್ಲಿ ಎರಡು ವೆಂಟೆಡ್ ಡ್ಯಾಮ್ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತದೆ.

    -ಕಿರಣ್ ಕುಮಾರ್ ಕೊಡ್ಗಿ, ಶಾಸಕ, ಕುಂದಾಪುರ

    ನೂತನ ಶಾಸಕರು 15 ದಿನಕ್ಕೊಮ್ಮೆಯಾದರೂ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ಅಧಿಕಾರಿಗಳನ್ನು ನಿಯಂತ್ರಿಸಿ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು. ಕುಂದಾಪುರ ಪದವಿಪೂರ್ವ ಕಾಲೇಜು ಮೇಲ್ದರ್ಜೆಗೆ, ಸರ್ಕಾರಿ ಉತ್ತಮ ಶಿಕ್ಷಣ ವ್ಯವಸ್ಥೆ, ಕೃಷಿಕರಿಗೆ ಮಾರುಕಟ್ಟೆ ವ್ಯವಸ್ಥೆ, ವಾರಾಹಿ ಯೋಜನೆ ಪೂರ್ಣ, ಲಂಚಾವತಾರಕ್ಕೆ ಬ್ರೆಕ್ ಹಾಕುವ ಮೂಲಕ ಕುಂದಾಪುರಕ್ಕೆ ಹೊಸ ಭಾಷ್ಯ ಬರೆಯಬೇಕು.

    -ಸಾಯಿನಾಥ ಶೇಟ್, ಸಮಾಜ ಸೇವಕ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts