More

    ಸಮ ಸಮಾಜಕ್ಕಾಗಿ ಶ್ರಮಿಸಿದ ನಾಯಕ ಶಾಂತವೇರಿ

    ಸೊರಬ: ಸಮಾಜವಾದಿ ನಾಯಕ ಶಾಂತವೇರಿ ಗೋಪಾಲ ಗೌಡ ಅವರು ಜನತೆಗೆ ಭೂಮಿ, ಬಂಡವಾಳ, ಅಧಿಕಾರ ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ನಂಬಿ ಜನಪರ ಹೋರಾಟಕ್ಕಿಳಿದಿದ್ದರು ಎಂದು ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು.

    ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್ ಹಾಗೂ ಸೊರಬ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಶನಿವಾರ ಆಯೋಜಿಸಿದ್ದ ಶಾಂತವೇರಿ ಗೋಪಾಲ ಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದಿನ ರಾಜಕಾರಣದಲ್ಲಿ ಬರೀ ಸ್ವಾರ್ಥ, ಸ್ವಜನ ಪಕ್ಷಪಾತ, ನಯವಂಚನೆಯನ್ನು ಕಾಣುತ್ತೇವೆ. ಆದರೆ ಗೋಪಾಲ ಗೌಡರು ಕೋಮವಾದ, ಜಾತಿವಾದ ಮೀರಿ ಸಮಾಜದ ಹಿತಕ್ಕಾಗಿ ಹೋರಾಟ ನಡೆಸಿದವರು. ಗೇಣಿದಾರರಿಗೆ ಭೂಹಕ್ಕು ಕೊಡಿಸುವಲ್ಲಿ ಅವರ ಪಾತ್ರ ಹಿರಿದು ಎಂದರು.
    ಗೋಪಾಲ ಗೌಡರ ಬದುಕು-ಹೋರಾಟ ಉಪನ್ಯಾಸ ನೀಡಿದ ಶಿವಮೊಗ್ಗ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಜಿ.ಕೆ.ಸತೀಶ, ರಾಜಕೀಯ ಅಧಿಕಾರ ಪಡೆದು ಬರಿಗೈಯಲ್ಲಿ ಹೊರಟುಹೋಗುವಂಥದ್ದು ಈ ದೇಶದ ಸಂಸ್ಕೃತಿಯಲ್ಲಿ ಅಪರೂಪ. ಅಂತಹ ತ್ಯಾಗ, ಸರಳ, ಹೋರಾಟದ ಮನೋಭಾವದ ವ್ಯಕ್ತಿತ್ವ ಶಾಂತವೇರಿ ಗೋಪಾಲ ಗೌಡರಲ್ಲಿತ್ತು ಎಂದು ಬಣ್ಣಿಸಿದರು.
    ಗೋಪಾಲ ಗೌಡರ ಚುನಾವಣಾ ಪ್ರಚಾರ ಸಭೆಗಳನ್ನು ಜ್ಞಾನ ಪ್ರಸರಣ ಕಾರ್ಯಕ್ರಮಗಳೆಂದು ಕರೆಯಲಾಗುತ್ತಿತ್ತು. ಕುಂಟುಬ, ಆಸ್ತಿ, ಹಣಕ್ಕಾಗಿ ಬದುಕದೆ ಬಡವರ, ಶೋಷಣೆಗೆ ಒಳಗಾದವರ ಪ್ರಗತಿಗಾಗಿ ಶ್ರಮಿಸಿದರು. ಇಂದು ಬಂಡವಾಳಶಾಹಿಗಳು ಬಡವರ ಭೂಮಿ ಕಸಿಯುವಂತ ತಂತ್ರ ರೂಪಿಸುತ್ತಿದ್ದಾರೆ. ಗೇಣಿದಾರ ಹೋರಾಟದಿಂದ ಪಡೆದ ಭೂಮಿಯನ್ನು ಕಳೆದುಕೊಳ್ಳದಂತೆ ಜನರು ಎಚ್ಚರ ವಹಿಸಬೇಕು ಎಂದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಿವಾನಂದ ಪಾಣಿ, ಕಾರ್ಯದರ್ಶಿ ಬಿ.ರಮೇಶ್, ಸದಸ್ಯೆ ಸವಿತಾ, ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಿ.ಪಿ.ವೆಂಕಟೇಶ್ ನಾಯ್ಕ, ಉಪನ್ಯಾಸಕ ಸುಧೀರ್, ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಎಸ್.ಎಂ.ನೀಲೇಶ, ಶಿಕ್ಷಕ ಸೋಮಶೇಖರ್, ಸಮಾಜ ಹೋರಾಟಗಾರ ಮಂಜುನಾಥ್ ಕೆ. ಹಳೇ ಸೊರಬ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಪಿ.ಸದಾನಂದ, ನಿವೃತ್ತ ಬಿಇಒ ನಿಂಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts