More

    ಮಣ್ಣು ಸಾಗಾಟ ಲಾರಿಗಳ ಆರ್ಭಟ

    -ನಿಶಾಂತ್ ಬಿಲ್ಲಂಪದವು ವಿಟ್ಲ

    ಕರ್ನಾಟಕ ಗಡಿ ಪ್ರದೇಶದಿಂದ ಹೊರರಾಜ್ಯಗಳಿಗೆ ಮಣ್ಣು ಸಾಗಿಸುವ ಲಾರಿಗಳ ಅಬ್ಬರ ಮತ್ತೆ ಆರಂಭವಾಗಿದ್ದು,ಕಿರಿದಾದ ರಸ್ತೆಗಳಲ್ಲಿ ಬೃಹತ್ ಲಾರಿಗಳು ಸಂಚರಿಸುತ್ತಿರುವುದು ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸ್ಥಳೀಯ ಪಂಚಾಯಿತಿಗಳು ಇಲಾಖೆಗಳಿಗೆ ದೂರು ನೀಡಿದರೂ, ಸಂಬಂಧಪಟ್ಟ ಅಧಿಕಾರಿಗಳು ಮೌನ ತಾಳಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

    ಕನ್ಯಾನ ಗ್ರಾಮದ ಪಾದೆಕಲ್ಲು ಭಾಗಕ್ಕೆ ಕೇರಳ ಭಾಗದಿಂದ ಮಣ್ಣು ತರಿಸಿಕೊಂಡು ಅಲ್ಲಿಂದ ಮಣ್ಣನ್ನು ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗಕ್ಕೆ ಕಳುಹಿಸುವ ಕಾರ್ಯವನ್ನು ಮಧ್ಯವರ್ತಿಗಳು ನಡೆಸುತ್ತಿದ್ದಾರೆ. ಕೆಲವು ಪ್ರಭಾವಿಗಳು ಇದರ ಹಿಂದೆ ಇರುವ ಕಾರಣದಿಂದ ಅಧಿಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

    ಸ್ಥಳಿಯಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ನೇರ ಪರವಾನಗಿ ಪಡೆದುಕೊಂಡು ಈ ಮಣ್ಣು ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ. ಬೃಹತ್ ಪ್ರಮಾಣದಲ್ಲಿ ಪರಿಸರ ನಾಶವಾಗುತ್ತಿದ್ದರೂ, ಇದಕ್ಕೆ ಅಧಿಕಾರಿಗಳು ಹೇಗೆ ಪರವಾನಗಿ ನೀಡಿದ್ದಾರೆಂಬ ಪ್ರಶ್ನೆ ಮೂಡುತ್ತಿದೆ. ಕನ್ಯಾನ ಗ್ರಾಮದ ಕೆಲವು ಪ್ರದೇಶ ಬಳ್ಳಾರಿಯಾಗಿ ಪರಿವರ್ತನೆಯಾಗುತ್ತಿದೆ.

    ಹೆದ್ದಾರಿಯಲ್ಲಿ ಮಾತ್ರ ಸಂಚರಿಸಲು ಯೋಗ್ಯವಾಗಿರುವ ವಾಹನಗಳು ಗ್ರಾಮೀಣ ರಸ್ತೆಗೆ ಬರುತ್ತಿರುವುದರಿಂದ ಅಪಘಾತ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯ ನಿವಾಸಿಗಳು ಸಂಘಟಿತ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದು, ಅಧಿಕಾರಿಗಳು ಅಕ್ರಮವನ್ನು ತಡೆದು, ಲಾರಿಗಳ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

    ರಸ್ತೆ ಸಂಪೂರ್ಣ ಹಾನಿ

    ಕನ್ಯಾನ-ಮುಗುಳಿ ಸಂಪರ್ಕ ರಸ್ತೆಯನ್ನು ಕೆಲವು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದ್ದು, ಈಗ ಲಾರಿಗಳ ಓಡಾಟದಿಂದ ಸಂಪೂರ್ಣ ಹದಗೆಟ್ಟು ಹೋಗಿದೆ. ಮಳೆಗಾಲ ಸಂದರ್ಭ ಸಣ್ಣ ವಾಹನಗಳ ಸಂಚಾರಕ್ಕೇ ಸಂಚಕಾರ ಏರ್ಪಟ್ಟಿತ್ತು. ಆ ಬಳಿಕ ತೇಪೆ ಕಾರ್ಯ ಮಾಡಿದ್ದು ಬಿಟ್ಟರೆ ಸಮರ್ಪಕ ದುರಸ್ತಿ ನಡೆಸಿಲ್ಲ. ಈಗ ಮತ್ತೆ ಲಾರಿಗಳ ಸಂಚಾರ ಸಣ್ಣ ರಸ್ತೆಗಳಲ್ಲಿ ಪ್ರಾರಂಭವಾಗಿರುವುದು ಸ್ಥಳೀಯರ ನಿದ್ದೆಗೆಡಿಸಿದೆ.

    ವಾಹನ ಸವಾರರಿಗೆ ಗೊಂದಲ

    ಉಕ್ಕುಡದಲ್ಲಿ ಲಾರಿಗಳ ತೂಕ ಮಾಪನ ಮಾಡಲಾಗುತ್ತಿದ್ದು, ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿನ ಭಾರ ಇರುವ ಲಾರಿಗಳಿಂದ ತೆಗೆದ ಮಣ್ಣನ್ನು ರಸ್ತೆ ಹಿಂಬದಿ ಸುರಿಯಲಾಗುತ್ತಿತ್ತು. ಈಗ ತೂಕ ಕೇಂದ್ರದ ಬದಿಯಲ್ಲಿ ತುಂಬಲಾಗುತ್ತಿದೆ. ತಿರುವಿನಲ್ಲಿ ಕೇಂದ್ರವಿದ್ದು, ಲಾರಿಗಳು ಏಕಾಏಕಿ ಸಂಚರಿಸುವ ಕಾರಣದಿಂದ ವಾಹನ ಸವಾರರು ಗೊಂದಲಕ್ಕೆ ಒಳಗಾಗುವ ಜತೆಗೆ ಅಪಘಾತಗಳಿಗೆ ಕಾರಣವಾಗುತ್ತಿದೆ.

    ಉಗ್ರ ಹೋರಾಟ ಎಚ್ಚರಿಕೆ

    ಕನ್ಯಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣಿನ ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಭಾವಿ ವ್ಯಕ್ತಿಗಳು ಸರ್ಕಾರದ ನಿವೇಶನಕ್ಕೆ ಕಾದಿರಿಸಿದ 4 ಎಕರೆ ಜಾಗದಲ್ಲಿ ಅಕ್ರಮ ಮಣ್ಣು ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಕ್ರಮ ಆಗಿಲ್ಲ. ತಹಸೀಲ್ದಾರರು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ಪರಿಶೀಲನೆ ಮತ್ತು ಸರ್ವೇ ಮಾಡಿದ್ದು, ಮಾಹಿತಿ ಬಹಿರಂಗಪಡಿಸುತ್ತಿಲ್ಲ ಎಂದು ಕನ್ಯಾನ ಗ್ರಾಪಂ ಉಪಾಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್ ಆರೋಪಿಸಿದ್ದಾರೆ.

    ಬೇರೆ ಪ್ರದೇಶಗಳ ಪರವಾನಗಿ ಇಟ್ಟುಕೊಂಡು ಕನ್ಯಾನ ಗ್ರಾಮದಿಂದ ದಿನಕ್ಕೆ ಸಾವಿರಾರು ಟನ್ ಕೆಂಪು ಮಣ್ಣು ಸಾಗಾಟ ಮಾಡಲಾಗುತ್ತಿದೆ. ನಕಲಿ ಪರವಾನಗಿಯಲ್ಲಿ ಕೂಡ ಮಣ್ಣು ಸಾಗಾಟ ಆಗುತ್ತಿದೆ. ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ದೂರು ನೀಡಲಾಗಿದೆ. ಗ್ರಾಪಂ ರಸ್ತೆಗಳಲ್ಲಿ ಬೃಹತ್ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆ ಹದಗೆಟ್ಟು ಹೋಗಿದೆ.ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಮುಂದಿನ ದಿನದಲ್ಲಿ ನಾಗರಿಕರನ್ನು ಸೇರಿಸಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕನ್ಯಾನ ಗ್ರಾಮ ಪಂಚಾಯಿತಿ ಸದಸ್ಯ ಮೊಯ್ದೀನ್ ಕುಂಞ, ಅಬ್ದುಲ್ ಮಜೀದ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts