More

    ರಿಂಗ್‌ರೋಡ್ ಸಂಪರ್ಕ ಕಡಿತ

    ಗಂಗೊಳ್ಳಿ: ಇಲ್ಲಿನ ಮ್ಯಾಂಗನೀಸ್ ರಸ್ತೆ ಸಮೀಪದಿಂದ ದಾಕುಹಿತ್ಲು ತನಕ ಪಂಚಗಂಗಾವಳಿ ನದಿ ತೀರದಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ರಿಂಗ್‌ರೋಡ್ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದರೂ, ಸಂಪರ್ಕ ರಸ್ತೆ ಸಮಸ್ಯೆಯಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

    ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯಲ್ಲಿನ ಸ್ಮಶಾನದ ಬಳಿ ರಿಂಗ್‌ರೋಡ್ ಆರಂಭವಾಗುವಲ್ಲಿ ಆಳದ ಚರಂಡಿ ತೋಡಲಾಗಿದೆ. ಇದರಿಂದಾಗಿ ರಿಂಗ್‌ರೋಡ್ ಸಂಪರ್ಕ ಕಡಿತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಜನರು ನಡೆದುಕೊಂಡು ಹೋಗುವುದೂ ಸಾಧ್ಯವಿಲ್ಲ. ರಸ್ತೆಯ ತುದಿಯಲ್ಲೇ ತಾತ್ಕಾಲಿಕ ರಸ್ತೆಯನ್ನು ಅಗೆದು ಹಾಕಿರುವುದರಿಂದ ರಿಂಗ್‌ರೋಡ್ ಆಗಿಯೂ ಯಾವುದೇ ಪ್ರಯೋಜನ ಈ ಭಾಗದ ಜನರಿಗೆ ದೊರೆಯದಂತಾಗಿದೆ. ರಿಂಗ್‌ರೋಡ್ ಕಾಮಗಾರಿ ಸುಸೂತ್ರವಾಗಿ ನಡೆದಿದ್ದು, ಕೊನೆ ಹಂತದಲ್ಲಿ ಎದುರಾದ ಸಮಸ್ಯೆಯಿಂದ ರಿಂಗ್‌ರೋಡ್ ಸದ್ಯಕ್ಕೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

    ಸ್ಮಶಾನದ ಬಳಿ ಮಳೆ ನೀರು ಹರಿದು ಹೋಗುವ ಚರಂಡಿ ಇದ್ದು, ರಿಂಗ್‌ರೋಡ್ ನಿರ್ಮಾಣ ಸಂದರ್ಭ ಈ ಚರಂಡಿಯನ್ನು ಮುಚ್ಚಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ರಿಂಗ್‌ರೋಡ್ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿರುವುದರಿಂದ ಸ್ಥಳೀಯರು ಮಳೆ ನೀರು ಹರಿದು ಹೋಗಲು ಚರಂಡಿ ಪುನರ್ ನಿರ್ಮಿಸುವಂತೆ ಒತ್ತಾಯಿಸಿದ್ದರು. ಹೀಗಾಗಿ ಗುತ್ತಿಗೆದಾರರು ತಾತ್ಕಾಲಿಕ ರಸ್ತೆಯನ್ನು ಅಗೆದು ಹಾಕಿ ತಾತ್ಕಾಲಿಕ ಚರಂಡಿ ರೂಪಿಸಿದ್ದಾರೆ. ಹೀಗಾಗಿ ರಿಂಗ್ ರಸ್ತೆಗೆ ಸಂಪರ್ಕ ಕಡಿತಗೊಂಡಿದ್ದು, ರಿಂಗ್ ರೋಡ್‌ಗೆ ಸಂಪರ್ಕ ಕಲ್ಪಿಸುವ ದಾರಿ ಇಲ್ಲದಂತಾಗಿದೆ.

    ಒಟ್ಟಿನಲ್ಲಿ ಗಂಗೊಳ್ಳಿ ನಾಗರಿಕರ ಬಹು ನಿರೀಕ್ಷಿತ ರಿಂಗ್‌ರೋಡ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಬಗೆಹರಿಸಿ ರಿಂಗ್‌ರೋಡ್ ಕಾಮಗಾರಿ ಪೂರ್ಣಗೊಳಿಸಿ ಸ್ಥಳೀಯರ ಉಪಯೋಗಕ್ಕೆ ಬಿಟ್ಟುಕೊಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

    8 ಕೋಟಿ ರೂ.ಗಳ ಯೋಜನೆ

    ಗಂಗೊಳ್ಳಿಯಲ್ಲಿ ಪಂಚಗಂಗಾವಳಿ ನದಿ ತೀರದಲ್ಲಿ ಸುಮಾರು 1.4 ಕಿ.ಮೀ ಉದ್ದದ ರಿಂಗ್‌ರೋಡ್ ನಿರ್ಮಿಸಲು ಸರ್ಕಾರ ಸಣ್ಣ ನೀರಾವರಿ ಇಲಾಖೆ ಮೂಲಕ 8 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಕಳೆದ ವರ್ಷ ಮೇ 21ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ಸಮೀಪದಿಂದ ದಾಕುಹಿತ್ಲು ತನಕ ಪಂಚಗಂಗಾವಳಿ ನದಿ ತೀರದಲ್ಲಿ ಸುಮಾರು 1.4 ಮೀಟರ್ ಉದ್ದ ಹಾಗೂ 6 ಮೀಟರ್ ಅಗಲದ ನಂದಿ ದಂಡೆ ಸಂರಕ್ಷಣಾ ಕಾಮಗಾರಿ ನಡೆದಿದೆ.

    ರಿಂಗ್‌ರೋಡ್ ಮಾಡುವ ಸಂದರ್ಭ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆ ಅಗೆದು ಹಾಕಿ ಚರಂಡಿ ಮಾಡಿದ್ದಾರೆ. ಹೀಗಾಗಿ ರಿಂಗ್ ರಸ್ತೆಗೆ ಸಂಪರ್ಕ ಕಡಿತಗೊಂಡಿದ್ದು, ರೋಡ್‌ಗೆ ಸಂಪರ್ಕ ಕಲ್ಪಿಸುವ ದಾರಿ ಇಲ್ಲದಂತಾಗಿದೆ. ಇದರಿಂದ ರಸ್ತೆ ಮೇಲೆ ವಾಹನ ಸಂಚರಿಸುತ್ತಿಲ್ಲ. ಸಂಪರ್ಕ ರಸ್ತೆ ಸಮಸ್ಯೆ ಬಗೆಹರಿಸಿ ರಿಂಗ್‌ರೋಡ್‌ನ್ನು ಸಾರ್ವಜನಿಕರಿಗೆ ಬಿಟ್ಟುಕೊಡಬೇಕು.

    -ಅಶೋಕ್, ಮ್ಯಾಂಗನೀಸ್ ರಸ್ತೆ ನಿವಾಸಿ

    ಸ್ಮಶಾನದ ಬಳಿ ಇದ್ದ ಚರಂಡಿ ಪುನರ್ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದು, ಚರಂಡಿ ನಿರ್ಮಾಣಕ್ಕಾಗಿ ತಾತ್ಕಾಲಿಕ ರಸ್ತೆ ಅಗೆಯಲಾಗಿದೆ. ಇದರಿಂದ ರಿಂಗ್‌ರೋಡ್‌ನ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗುವುದು.

    -ಪುನೀತ್, ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts