More

    ಕುಡಿವ ನೀರು, ಒಳಚರಂಡಿ ದೊಡ್ಡ ಸಮಸ್ಯೆ

    -ಗೋಪಾಲಕೃಷ್ಣ ಪಾದೂರು ಉಡುಪಿ

    ಒಳಚರಂಡಿ ಅವ್ಯವಸ್ಥೆಯಿಂದಾಗಿ ನಗರದ ಹೃದಯಭಾಗದಲ್ಲೇ ಹರಿದುಹೋಗುವ ಇಂದ್ರಾಣಿ ನದಿ ನೀರು ಕಲುಷಿತಗೊಂಡು ಅಂತರ್ಜಲ ಮಟ್ಟ ಕುಸಿಯುತ್ತಿದೆ. ನಗರಕ್ಕೆ ಕುಡಿಯುವ ನೀರು ಪೂರೈಕೆ ಬಹುದೊಡ್ಡ ಸವಾಲಾಗಿದ್ದು, ಇದಕ್ಕೆ ಪೂರಕವಾಗಿ ಕೈಗೆತ್ತಿಕೊಂಡಿರುವ ವಾರಾಹಿ ಯೋಜನೆಯೂ ಕುಂಟುತ್ತಾ ಸಾಗುತ್ತಿದೆ.

    ಪರಿಸರಾಸಕ್ತರು ಇಂದ್ರಾಣಿ ಉಳಿಸಿ ಹೋರಾಟ ಕೈಗೆತ್ತಿಕೊಂಡಾಗ ಯಶ್‌ಪಾಲ್ ಸುವರ್ಣ ಧ್ವನಿಗೂಡಿಸಿದ್ದರು. ಈಗ ಅವರೇ ಶಾಸಕರಾಗಿರುವುದರಿಂದ ಯುಜಿಡಿ ವ್ಯವಸ್ಥೆಗೆ ಕಾಯಕಲ್ಪ ನಿರೀಕ್ಷೆ ಇದೆ. ವ್ಯವಸ್ಥಿತ ಒಳಚರಂಡಿ ಇಲ್ಲದೆ ಸಾರ್ವಜನಿಕರೂ ಅಸಹಾಯಕರಾಗಿದ್ದಾರೆ. ಸ್ವಂತ ಪಿಟ್ ಹೊಂದಿಲ್ಲದ ಬಹುತೇಕರು ಮಳೆ ನೀರು ಹರಿಯುವ ತೋಡಿಗೆ ತ್ಯಾಜ್ಯ ನೀರು ಬಿಡುತ್ತಾರೆ. ಇದು ಕಲ್ಮಾಡಿ ಹೊಳೆಗೆ (ಇಂದ್ರಾಣಿ ನದಿಗೆ) ಸೇರುತ್ತದೆ. ಪ್ರವಾಸೋದ್ಯಮ, ಮೀನುಗಾರಿಕೆಗೆ ಪೂರಕ ವಲಯವಾಗಿ ಗುರುತಿಸಿಕೊಂಡಿರುವ ಮಲ್ಪೆಯಲ್ಲಿ ಒಳಚರಂಡಿ ವ್ಯವಸ್ಥೆ ರೂಪುಗೊಂಡಿಲ್ಲ.

    ಇದಕ್ಕೆಲ್ಲ ಪರಿಹಾರ ನಿಟ್ಟಿನಲ್ಲಿ ನಗರಸಭೆ ಸಂಪೂರ್ಣ ಒಳಚರಂಡಿ ವ್ಯವಸ್ಥೆ ಪುನರ್‌ನಿರ್ಮಾಣಕ್ಕಾಗಿ 2021ರಲ್ಲಿ 330 ಕೋಟಿ ರೂ. ವೆಚ್ಚದ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಪ್ರಸ್ತಾವನೆಗೆ 2 ವರ್ಷ ಕಳೆದಿರುವುದರಿಂದ ಹೊಸ ದರ ಪಟ್ಟಿ ನಮೂದಿಸಿ ಹೊಸ ಪ್ರಸ್ತಾವನೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ. ಈ ಯೋಜನೆ ಜಾರಿಯಾದರೆ ವೆಟ್‌ವೆಲ್‌ಗಳ ಸಂಖ್ಯೆ 4ರಿಂದ 5ಕ್ಕೆ ಏರಿಕೆಯಾಗಲಿದೆ. ಪ್ರಸ್ತುತ 2 ಹಂತದಲ್ಲಿ ತ್ಯಾಜ್ಯ ನೀರು ಶುದ್ಧೀಕರಣಗೊಳ್ಳುತ್ತಿದ್ದು, ನಂತರ 3 ಹಂತದಲ್ಲಿ ಶುದ್ಧೀಕರಣವಾಗಲಿದೆ. ಟ್ರೀಟ್‌ಮೆಂಟ್ ಪ್ಲಾಂಟ್ ಸಾಮರ್ಥ್ಯ 12ರಿಂದ 24 ಎಂಎಲ್‌ಡಿಗೆ ಏರಿಕೆಯಾಗಲಿದೆ.

    ವಾರಾಹಿ ಯೋಜನೆ ಮುಗಿವುದೇ?

    ನಗರಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ 172 ಕೋಟಿ ರೂ. ವೆಚ್ಚದ ವಾರಾಹಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಶೇ.80ರಷ್ಟು ಮುಗಿದಿದೆ. ನಗರದ ಸುತ್ತಮುತ್ತ ಸಹಿತ ಒಟ್ಟು 271 ಕಿ.ಮೀ. ಪೈಪ್‌ಲೈನ್ ಕಾಮಗಾರಿ ಹಲವು ಕಡೆಗಳಲ್ಲಿ ನಡೆದಿದೆ. ಒಟ್ಟು ನಗರದಲ್ಲಿ 18 ಸಾವಿರ ಮನೆಗಳಿಗೆ ಹಳೇ ಸಂಪರ್ಕವಿದ್ದು, ಹೊಸದಾಗಿ 17 ಸಾವಿರ ನೀರಿನ ಸಂಪರ್ಕ ನೀಡಲಾಗುತ್ತಿದೆ. ಮಾರ್ಚ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ವಿಳಂಬದಿಂದಾಗಿ ಈ ಬೇಸಿಗೆಯಲ್ಲಿ ಸಾರ್ವಜನಿಕರು ತೀವ್ರ ನೀರಿನ ಸಮಸ್ಯೆ ಅನುಭವಿಸುವಂತಾಗಿದೆ. ಮುಂದಿನ ಬೇಸಿಗೆಗಾದರೂ ಕುಡಿಯಲು ವಾರಾಹಿ ನೀರು ಸಿಗಲೆಂಬುದು ಜನರ ಬಯಕೆ.

    ಕರಾವಳಿ ಜಂಕ್ಷನ್- ಮಲ್ಪೆ ಚತುಷ್ಪಥ

    ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ರಸ್ತೆಯನ್ನು 70 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಚುನಾವಣಾ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿದ್ದ ಭೂಸ್ವಾಧೀನ ಪ್ರಕ್ರಿಯೆ ಮತ್ತೆ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರನ್ನು ಒಲಿಸಿಕೊಂಡು ಪರ್ಕಳದಂತೆ ಕಾಮಗಾರಿ ಅರ್ಧಕ್ಕೆ ನಿಲ್ಲದಂತೆ ನಿಗದಿತ ಸಮಯದಲ್ಲಿ ಮುಕ್ತಾಯಗೊಳ್ಳುವಂತೆ ಮಾಡುವ ಜವಾಬ್ದಾರಿಯೂ ಹೊಸ ಶಾಸಕರ ಮೇಲಿದೆ. ಮೀನುಗಾರಿಕಾ ಬಂದರು ಮತ್ತು ಮಲ್ಪೆ ಬೀಚ್ ಕಾರಣ ಈ ರಸ್ತೆಯಲ್ಲಿ ವಾಹನ ದಟ್ಟಣೆ ಅತ್ಯಧಿಕವಾಗಿದ್ದು, ಕಿರಿದಾದ ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ. ರಸ್ತೆ ವಿಸ್ತರಣೆ ಬಂದರಿನಲ್ಲಿ ಆರ್ಥಿಕ ಚಟುವಟಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿ.

    ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ವೇಗ

    ನಾಲ್ಕು ದಶಕಗಳಷ್ಟು ಹಳೆಯದಾಗಿರುವ ಅಜ್ಜರಕಾಡು ಜಿಲ್ಲಾಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, 2020ರಲ್ಲಿ ರಾಜ್ಯ ಸರ್ಕಾರ 250 ಬೆಡ್ ಸಾಮರ್ಥ್ಯದ 115 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಿತ್ತು. ಕಟ್ಟಡ ಕಾಮಗಾರಿ ಶೇ.50ರಷ್ಟು ಪೂರ್ಣಗೊಂಡಿದ್ದು, ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸುವುದು, ಸಿಬ್ಬಂದಿ ಭರ್ತಿ, ಕ್ಲಪ್ತ ಸಮಯಕ್ಕೆ ಅನುದಾನ ಬಿಡುಗಡೆ ಸವಾಲು ಶಾಸಕರ ಮುಂದಿದೆ. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸರ್ಕಾರದ ವಶಕ್ಕೆ ಬಂದಿದ್ದರೂ 200 ಬೆಡ್ ಸಾಮರ್ಥ್ಯಕ್ಕೆ ತಕ್ಕಂತೆ ಸಿಬ್ಬಂದಿ ಭರ್ತಿ ಮಾಡಿಲ್ಲ. ಈ ಬಗ್ಗೆಯೂ ಗಮನಹರಿಸಬೇಕಿದೆ.

    ಹೊಸ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬರುತ್ತಿದ್ದು, ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಬೇಕು. ವಾರಾಹಿ ಕುಡಿಯುವ ನೀರಿನ ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಇಂದ್ರಾಳಿ ರೈಲ್ವೆ ಸೇತುವೆ ನಿರ್ಮಾಣ ಹಾಗೂ ಪರ್ಕಳ ಚತುಷ್ಪಥ ರಸ್ತೆ ಕಾಮಗಾರಿ ಶೀಘ್ರ ಮುಗಿಸಬೇಕು.

    -ಡಾ.ಪಿ.ವಿ.ಭಂಡಾರಿ, ಮನೋವೈದ್ಯರು, ಉಡುಪಿ

    ಬ್ರಹ್ಮಾವರ ತಾಲೂಕಿಗೆ ನ್ಯಾಯಾಲಯ ಸಂಕೀರ್ಣ, ಸಬ್‌ರಿಜಿಸಟ್ಟ್ರೆಾರ್ ಕಚೇರಿ ಮೊದಲಾದ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಜಿಲ್ಲಾಸ್ಪತ್ರೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು. ವಾರಾಹಿ ಯೋಜನೆ ಕಾಮಗಾರಿ ಬೇಗನೆ ಮುಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.

    -ಯಶ್‌ಪಾಲ್ ಸುವರ್ಣ, ನೂತನ ಶಾಸಕರು, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts