ಮಾಡಿದ ಕೆಲಸ, ಹಿರಿಯ ಸಹಕಾರದಿಂದ ಗೆಲುವು ನಿಶ್ಚಿತ

Kota Pujari
ಕೋಟದ ಹೋಟೆಲೊಂದರಲ್ಲಿ ಶುಕ್ರವಾರ ಬೆಳಗ್ಗೆ ಚಹಾ ಸೇವಿಸಿದ ಶ್ರೀನಿವಾಸ್​ ಪೂಜಾರಿ, ಗ್ರಾಹಕರೊಂದಿಗೆ ಚುನಾವಣೆ ಕುರಿತಂತೆ ಮಾತುಕತೆ ನಡೆಸಿದರು.
Published on

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ ವಿಶ್ವಾಸ -- ದೊಡ್ಡ ಅಂತರದಲ್ಲಿ ಗೆಲ್ಲುತ್ತೇನೆ

ಉಡುಪಿ: ಬಿಜೆಪಿ-ಜೆಡಿಎಸ್​ ಒಟ್ಟಾಗಿ ನನ್ನ ಗೆಲುವಿಗಾಗಿ ಶ್ರಮ ವಹಿಸಿದ್ದಾರೆ. ಬಿಜೆಪಿಯ ಬೂತ್​ ಮಟ್ಟದ ಕಾರ್ಯಕರ್ತರು ದೇಶದ ಚುನಾವಣೆ ಎಂದು ಕೆಲಸ ಮಾಡಿದ್ದಾರೆ. ಪಕ್ಷದ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಬಿ.ಎಸ್​.ಯಡಿಯೂರಪ್ಪ, ವಿಜಯೇಂದ್ರ, ಮಾಜಿ ಪ್ರಧಾನಿ ದೇವೇಗೌಡ ಎಲ್ಲರೂ ಸಹಕರಿಸಿದ್ದು, ಗೆಲುವು ನಿಶ್ಚಿತ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಗ್ರಾಪಂನಿಂದ ವಿಧಾನ ಪರಿಷತ್​ ಸದಸ್ಯನಾಗಿ, ಸಚಿವನಾಗಿ ನಾನು ಮಾಡಿದ ಕೆಲಸಗಳನ್ನು ಜನ ಗಮನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಸಾಧನೆ ಸಹಕಾರವಾಗಲಿದೆ. ನಾನು ಮಾಡಿರುವ ಕೆಲಸ ನನ್ನ ನೆರವಿಗೆ ಬರಲಿದ್ದು, ದೊಡ್ಡ ಅಂತರದಲ್ಲಿ ಗೆಲ್ಲುತ್ತೇನೆ ಎಂದರು.

ಎರಡೂ ಜಿಲ್ಲೆಯಲ್ಲಿ ಲೀಡ್​

ಉಡುಪಿ- ಚಿಕ್ಕಮಗಳೂರು ಎರಡೂ ಜಿಲ್ಲೆಯಲ್ಲಿ ಬಿಜೆಪಿಗೆ ಲೀಡ್​ ಬರಲಿದೆ. ನನಗೆ ಗೆಲುವಾದಲ್ಲಿ ಅದರ ಗೌರವ ಎನ್​ಡಿಎ ಕಾರ್ಯಕರ್ತರಿಗೆ ಸಲ್ಲುತ್ತದೆ. ಜೆಡಿಎಸ್​ ಕಾರ್ಯಕರ್ತರೂ ಸಹ ಮನಪೂರ್ವಕವಾಗಿ ಕೆಲಸ ಮಾಡಿದ್ದಾರೆ. ವಿಪ ಸದಸ್ಯ ಭೋಜೇಗೌಡ ಅವರು ಹಾಗೂ ಅವರ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ಬೂತ್​ ಏಜೆಂಟ್​, ಕಾರ್ಯಕರ್ತರು ಕೊಟ್ಟಿರುವ ಮಾಹಿತಿ ಆಧಾರದಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ. ಹಗಲಿರುಳು ಶ್ರಮಿಸಿದ ಬೂತ್​ ಹಾಗೂ ತಳಮಟ್ಟದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಗೆಲ್ಲಲು ಜಾತಿ ಮುಖ್ಯವಲ್ಲ

ಈ ಚುನಾವಣೆಯಲ್ಲಿ ಬಂಟ-ಬಿಲ್ಲವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಚರ್ಚೆ ಆಯಿತು. ಆದರೆ, ಈ ಚುನಾವಣೆ ರಾಷ್ಟ್ರದ ಹಿತದ ಹಿನ್ನೆಲೆಯಲ್ಲಿ ನಡೆಯುತ್ತಿದೆ ಎನ್ನುವುದು ಎಲ್ಲರ ಅಭಿಪ್ರಾಯ. ಹೀಗಾಗಿ ಜಾತಿ ಮುಖ್ಯವಾಗಲಿದೆ ಎನ್ನುವುದನ್ನು ನಾನು ನಂಬುವುದಿಲ್ಲ. ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಸ್ಪರ್ಧಿಸಿದಾಗ ಒಂದು ರೀತಿಯ ಅಭಿಪ್ರಾಯ ಇರುತ್ತದೆ. ಕಿರಣ್​ ಕೊಡ್ಗಿ ಸ್ಪರ್ಧಿಸಿದಾಗ ನಾವು ಗೆಲ್ಲುತ್ತೇವೆ ಎಂದು ಕಾಂಗ್ರೆಸ್​ ಹೇಳಿತ್ತು. ಆದರೆ, ಕೊಡ್ಗಿ ಅವರು 45 ಸಾವಿರ ಮತಗಳ ಅಂತರದಲ್ಲಿ ಜಯಿಸಿದರು. ಹೀಗಾಗಿ ಜಾತಿಯ ಕಾರಣಕ್ಕಿಂತ ನೀತಿಯ ಕಾರಣದಿಂದಲೇ ಗೆಲ್ಲುವ ವಿಶ್ವಾಸವಿದೆ ಎಂದರು.

ಆರ್​ಎಸ್​ಎಸ್​ ರಾಜಕೀಯ ಪಕ್ಷವಲ್ಲ

ಆರ್​ಎಸ್​ಎಸ್​ ರಾಜಕೀಯ ಪಕ್ಷವಲ್ಲ. ಅದು, ವೈಚಾರಿಕ ವಿಚಾರದಲ್ಲಿ ಸ್ಪಷ್ಟತೆ ಇರುವ ಪರಿವಾರ ಅಥವಾ ಸಂಘಟನೆ. ಯಾವುದೇ ಪ್ರಚಾರ ಬಯಸದೆ ಬಿಜೆಪಿ ಹಾಗೂ ಮೋದಿ ಅವರ ಗೆಲುವಿಗೆ ಕೆಲಸ ಮಾಡಿದೆ, ಮಾಡುತ್ತಲೇ ಇದೆ ಎಂದರು. ಮಂಡ್ಯ ಸಂಸದೆ ಸುಮಲತಾ ಹಾಗೂ ಎಚ್​.ಡಿ. ದೇವೇಗೌಡ ನಡುವಿನ ಭಿನ್ನಮತ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೋಟ, ಚುನಾವಣೆ ಸಂದರ್ಭದಲ್ಲಿ ಸಣ್ಣಪುಟ್ಟ ಸಮಸ್ಯೆ ಬರುತ್ತದೆ. ಅವರಿಬ್ಬರ ಭಾವನೆಯನ್ನೂ ಪಕ್ಷದ ವರಿಷ್ಠರು ಆಲಿಸಿದ್ದಾರೆ. ಅವರೇ ಎಲ್ಲ ಸಮಸ್ಯೆ ಸರಿಪಡಿಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net