

ನವದೆಹಲಿ: ಉತ್ತರ ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ನಗರೀಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಗಳು ಸೇರಿದಂತೆ ವನ್ಯಜೀವಿಗಳು ತಮ್ಮ ಬೌಂಡರಿಯನ್ನು ದಾಟಿ ಮಾನವ ವಸತಿ ಪ್ರದೇಶಕ್ಕೆ ದಾಂಗುಡಿ ಇಡುತ್ತಿವೆ. ಅರಣ್ಯ ನಾಶದಂತಹ ಮಾನವನ ದುರಾಸೆಯಿಂದಾಗಿ ಮಾನವ-ಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಒಂದು ಸಮಸ್ಯೆಯಾಗಿ ಪರಿಣಮಿಸಿದೆ.
ಇಬ್ಬರು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಕರಡಿಯ ವೇಷ ಧರಿಸಿ ಉತ್ತರಖಂಡದ ಮಿರ್ಥಿ ಶಿಬಿರದ ಬಳಿಗೆ ಗುಂಪಾಗಿ ಬಂದಿದ್ದ ಮಂಗಗಳನ್ನು ಹಿಮ್ಮೆಟ್ಟಿಸಿದ್ದಾರೆ. ಕರಡಿ ವೇಷ ಧರಿಸಿದ್ದ ಐಟಿಬಿಪಿ ಸಿಬ್ಬಂದಿ ನೋಡಿದ ಮಂಗಗಳು ಎದ್ನೋ ಬಿದ್ನೋ ಎಂದು ಐಟಿಬಿಪಿ ಶಿಬಿರದಿಂದ ಕಾಲ್ಕಿತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಜಾಲತಾಣದಲ್ಲಿ ವಿಡಿಯೋ ಶೇರ್ ಆದಾಗಿನಿಂದ ಈವರೆಗೂ 24 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 800ಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಿಟ್ಟಿಸಿಕೊಂಡಿದೆ. ವಿಡಿಯೋ ನೋಡಿದವರಂತೂ ನಗುವಿನ ಅಲೆಯಲ್ಲಿ ತೇಲಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ವಿಡಿಯೋಗೆ ಹಿನ್ನೆಲೆ ಧ್ವನಿ ಇದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಭಾರತೀಯ ಜನತಾ ಪಾರ್ಟಿ ಅಭಿಮಾನಿಗಳ ಟ್ವಿಟರ್ ಪೇಜ್ನಲ್ಲಿ ಕಾಮೆಂಟ್ ಮಾಡಲಾಗಿದೆ. ಪ್ರಾಣಿಗಳಿಗೆ ಯಾವುದೇ ಹಾನಿ ಮಾಡದೆ ಸುರಕ್ಷಿತವಾಗಿ ಅವುಗಳನ್ನು ತೆರುವುಗೊಳಿಸಿದ್ದಕ್ಕೆ ಸಿಬ್ಬಂದಿಯನ್ನು ಮತ್ತೋರ್ವ ನೆಟ್ಟಿಗ ಮೆಚ್ಚಿಕೊಂಡಿದ್ದಾರೆ. (ಏಜೆನ್ಸೀಸ್)