VIDEO: ಜಪಾನಿನಲ್ಲಿ 25 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಟ್ರಕ್​ ಡ್ರೈವರ್​ನ ಪ್ರವರ ಇದು...

bicycle-seat 9 MAR 20
Published on

ಟೋಕಿಯೋ: ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಅದಲ್ಲಿ ಯಾವುದೇ ಮೂಲೆಗೆ ಹೋದರೂ ಕಳ್ಳತನ ಅಪರಾಧವೇ. ಆದಾಗ್ಯೂ ಕಳ್ಳತನವನ್ನೇ ವೃತ್ತಿಯನ್ನಾಗಿ, ಪ್ರವೃತ್ತಿಯನ್ನಾಗಿ ಸ್ವೀಕರಿಸಿದವರಿಗೆ ಕೊರತೆ ಇಲ್ಲ ಬಿಡಿ. ಜಪಾನಿನಲ್ಲಿ ಒಬ್ಬಾತ ದೇಶದ ಉದ್ದಗಲಕ್ಕೂ ಸಂಚರಿಸಿ ಕಳ್ಳತನ ಮಾಡುತ್ತಿದ್ದ. ಹಾಗಂತ ಕಳ್ಳತನ ಆತನ ವೃತ್ತಿಯಲ್ಲ!

ವೃತ್ತಿಯಲ್ಲಾತ ಟ್ರಕ್ ಡ್ರೈವರ್​. ಕಳೆದ 25 ವರ್ಷಗಳಿಂದ ಆತ ಕಳ್ಳತನ ಮಾಡುತ್ತಲೇ ಬಂದಿದ್ದ. ದುಬಾರಿ ಬೆಲೆಬಾಳುವ ವಸ್ತುಗಳನ್ನು ಅಲ್ಲ. ಆತನ ಕಣ್ಣು ಸೈಕಲ್​ ಸೀಟುಗಳ ಮೇಲೆ. ಹೀಗಾಗಿ ಟ್ರಕ್​ನಲ್ಲಿ ಎಲ್ಲೇ ಹೋದರೂ ಅಲ್ಲಿಂದ ಸೈಕಲ್​ ಸೀಟು ಕಳವು ಮಾಡಿ ತಂದು ಮನೆಯಲ್ಲಿ ಇರಿಸುತ್ತಿದ್ದ. ಹೀಗೆ ಆತ ಸಂಗ್ರಹಿಸಿದ ಸೈಕಲ್ ಸೀಟುಗಳ ಸಂಖ್ಯೆ ಬರೋಬ್ಬರಿ 5,800ಕ್ಕೂ ಹೆಚ್ಚು!

ಅಂದ ಹಾಗೆ ಈ ಟ್ರಕ್ ಡ್ರೈವರ್ ಹೆಸರು ಹಿರೋಕಿ ಸುದಾ. ವಯಸ್ಸು 57. ಸರ್ವೈಲೆನ್ಸ್ ಕ್ಯಾಮರಾ ಮೂಲಕ ಈತನ ಕಳ್ಳತನ ಬಹಿರಂಗವಾಗಿತ್ತು. ಒಸಾಕಾದ ಹಿಗಶಿಯೋಸಕಾದಲ್ಲಿ 2019ರ ನವೆಂಬರ್ 29 ಮತ್ತು 30ರಂದು 6,000 ರೂಪಾಯಿ ಮೌಲ್ಯದ ಎರಡು ಸೈಕಲ್ ಸೀಟುಗಳನ್ನು ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಚಿತ್ರೀಕರಿಸಲ್ಪಟ್ಟಿತ್ತು. ಕಳ್ಳನ ಪತ್ತೆಗೆ ಬಲೆ ಬೀಸಿದ ಪೊಲೀಸರಿಗೆ ಸುದಾ ಸಿಕ್ಕಿದ್ದು ಫೆಬ್ರವರಿ 13ರಂದು. ಪೊಲೀಸರ ಬಲೆಗೆ ಬಿದ್ದ ಕೂಡಲೇ ಅಪರಾಧವನ್ನು ತಪ್ಪೊಪ್ಪಿಕೊಂಡ. ಪೊಲೀಸರು ಆತನ ಬಳಿ ಸಿಕ್ಕಿದ ಸೈಕಲ್ ಸೀಟುಗಳನ್ನು ವಶಪಡಿಸಿ ಪ್ರದರ್ಶನಕ್ಕೆ ಇಟ್ಟುಬಿಟ್ಟಿದ್ದರು! (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net