

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬಿಟಿಎಂ ಲೇಔಟ್‌ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತನಗೆ ಕಿರುಕುಳ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಲಾಗರ್ ( Vlogger ) ಒಬ್ಬಳು ಗಂಭೀರ ಆರೋಪ ಮಾಡಿದ್ದಾರೆ.
ವ್ಲಾಗರ್ ಹೆಸರು ನೇಹಾ ಬಿಸ್ವಾಲ್. ಈಕೆ ಕೆಲಸ ಮುಗಿಸಿ ಮನೆಗೆ ಮರಳುವಾಗ ಇದ್ದಕ್ಕಿದ್ದಂತೆ ಓರ್ವ ಹುಡುಗ ಸೈಕಲ್‌ನಲ್ಲಿ ಅವಳ ಬಳಿಗೆ ಬಂದು ಅವಳ ಎದೆಯನ್ನು ಮುಟ್ಟುತ್ತಾನೆ. ಇದೇ ಸಮಯದಲ್ಲಿ ನೇಹಾ ವಿಡಿಯೋ ಬ್ಲಾಗ್ ರೆಕಾರ್ಡ್ ಮಾಡುತ್ತಿದ್ದಳು. ಇಡೀ ಘಟನೆ ಕ್ಯಾಮರಾದಲ್ಲಿ ದಾಖಲಾಗಿದೆ. ಈ ವಿಡಿಯೊವನ್ನು @karnatakaportf ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ತಾನು ವ್ಲಾಗ್ ಮಾಡುತ್ತಿದ್ದಾಗ ಒಬ್ಬ ಹುಡುಗನಿಂದ ಕಿರುಕುಳ ಅನುಭವಿಸಿದೆ ಎಂದು ವ್ಲಾಗರ್ ನೇಹಾ ಆರೋಪ ಮಾಡಿದ್ದಾರೆ. ಈ ಘಟನೆಯಿಂದ ತನಗೆ ತುಂಬಾ ಭಯವಾಗಿದ್ದು, ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದಿದ್ದಾರೆ. ಅಲ್ಲದೆ, ಆಕೆ ಅಳುತ್ತಾ ಮಾತನಾಡುತ್ತಿರುವುದು ವಿಡಿಯೋದಲ್ಲಿ ತೋರಿಸಲಾಗಿದೆ.
ನೇಹಾ ಬಿಸ್ವಾಲ್ ಹೇಳಿಕೆ ಪ್ರಕಾರ, ನಾನು ವ್ಲಾಗ್ ಮಾಡುತ್ತಿದ್ದೆ. ಈ ವೇಳೆ ಒಬ್ಬ ಹುಡುಗ ಸೈಕಲ್ ಓಡಿಸುತ್ತಾ ನನ್ನ ಮುಂದೆ ಹಾದು ಹೋದನು. ಇದೇ ಸಂದರ್ಭದಲ್ಲಿ ನನ್ನನ್ನು ನೋಡಿ ಯು-ಟರ್ನ್ ತೆಗೆದುಕೊಂಡು ನನ್ನ ಕಡೆಗೆ ಬರಲು ಪ್ರಾರಂಭಿಸಿದನು. ಮೊದಲಿಗೆ ಆತ ನನ್ನನ್ನು ಗೇಲಿ ಮಾಡಿದನು ಮತ್ತು ನನ್ನನ್ನು ಕ್ಯಾಮೆರಾದಲ್ಲಿ ಅನುಕರಿಸಿದನು. ಅಲ್ಲದೆ, ನನ್ನ ಎದೆಯನ್ನು ಮುಟ್ಟಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದನು. ಬಳಿಕ ಆ ಬಾಲಕ ಓಡಿಹೋಗಲು ಯತ್ನಿಸಿದ. ಆದರೆ, ಜನರು ಅವನನ್ನು ಹಿಡಿದರು. ಆ ಹುಡುಗನಿಗೆ ಹತ್ತು ವರ್ಷ. ಅವನು ಬಾಲಕನಾಗಿದ್ದರಿಂದ ಜನರು ಅವನನ್ನು ಕ್ಷಮಿಸುವಂತೆ ಕೇಳಿದರು ಎಂದು ನೇಹಾ ಹೇಳಿದ್ದಾರೆ.
ಬೈಸಿಕಲ್ನಲ್ಲಿ ಹೋಗುವಾಗ ಆಕಸ್ಮಾತ್ ಬ್ಯಾಲೆನ್ಸ್ ತಪ್ಪಿ ಸ್ಪರ್ಶಿಸಿದೆ ಹೊರತು ಬೇಕಂತಲೇ ಮುಟ್ಟಿದ್ದಲ್ಲ ಎಂದು ಬಾಲಕ ಹೇಳಿದ್ದಾನೆ. ಆದರೆ, ಮಹಿಳೆಯ ಎದೆಯನ್ನು ಸ್ಪರ್ಶಿಸಿದ ವಿಡಿಯೋ ಆತ ಉದ್ದೇಶಪೂರ್ಕವಾಗಿಯೇ ಈ ರೀತಿ ಮಾಡಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ. ಬಾಲಕನಾಗಿದ್ದರಿಂದ ಆತನನ್ನು ಕ್ಷಮಿಸು ಎಂದು ಅನೇಕರು ಕೇಳಿದರು. ಆದರೆ, ಅದಕ್ಕೆ ಒಪ್ಪದ ನೇಹಾ, ಆ ಬಾಲಕನಿಗೆ ಹೊಡೆದು ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ. (ಏಜೆನ್ಸೀಸ್)