ಬೆಂಗಳೂರು: ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದರೂ, ಪ್ರಬುದ್ಧ ಪಾತ್ರಗಳಿಂದ ದೊಡ್ಡ ಮಟ್ಟದಲ್ಲಿ ಮನೆ ಮಾತಾದವರು ನಟಿ ರುಕ್ಮಿಣಿ ವಸಂತ್. ‘ಬೀರ್‌ಬಲ್’ ಚಿತ್ರದ ಮೂಲಕ ತಮ್ಮ ಸಿನಿ ಬದುಕು ಆರಂಭಿಸಿದ ಅವರು, ಬಳಿಕ ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿಯ ಎರಡೂ ‘ಸೈಡ್’ಗಳಲ್ಲಿ ಕಾಣಿಸಿಕೊಂಡಿದ್ದರು. ಪ್ರಿಯಾ ಪಾತ್ರಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು. ಗಣೇಶ್ ಅಭಿನಯದ ‘ಬಾನದಾರಿಯಲ್ಲಿ’ ಯಶಸ್ಸಿನ ಬಳಿಕ ರುಕ್ಮಿಣಿ ಹಿಂದಿರುಗಿ ನೋಡಿಲ್ಲ. ಕನ್ನಡದ ಜತೆ ಪರಭಾಷಾ ಸಿನಿಮಾಗಳಲ್ಲೂ ಅವಕಾಶ ಪಡೆದುಕೊಂಡರು. ಇಂತಹ ರುಕ್ಮಿಣಿ ಇದೀಗ ಹ್ಯಾಟ್ರಿಕ್ ಹೀರೋಯಿನ್ ಆಗಿದ್ದಾರೆ. ಅರ್ಥಾತ್ ಮೂರು ವಾರಗಳಲ್ಲಿ ಅವರು ನಟಿಸಿರುವ ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ. ಕಳೆದ ವಾರ ಅ. 31ರಂದು ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆಯಾದ ‘ಬಘೀರ’ದಲ್ಲಿ ರುಕ್ಮಿಣಿ ಶ್ರೀಮುರುಳಿಗೆ ಜೋಡಿಯಾಗಿದ್ದರು. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಇದೀಗ ಎರಡನೇ ವಾರದತ್ತ ಹೆಜ್ಜೆ ಹಾಕಿದೆ. ಇದೀಗ ರುಕ್ಮಿಣಿ ಅಭಿನಯದ ಎರಡು ಸಿನಿಮಾಗಳು ಇನ್ನೆರಡು ವಾರಗಳಲ್ಲಿ ತೆರೆಗೆ ಬರಲಿವೆ. ತೆಲುಗಿನ ‘ಅಪ್ಪುಡೊ ಇಪ್ಪುಡೊ ಎಪ್ಪುಡೊ’ (ನ.8) ಹಾಗೂ ಕನ್ನಡದ ‘ಭೈರತಿ ರಣಗಲ್’(ನ.15) ರಿಲೀಸ್‌ಗೆ ಸಿದ್ಧವಾಗಿವೆ.
ತೆಲುಗಿಗೆ ಡೆಬ್ಯೂ:
ರುಕ್ಮಿಣಿ ವಸಂತ್ ಕನ್ನಡ ಸಿನಿಮಾ ಅಷ್ಟೇ ಅಲ್ಲ, ತೆಲುಗು, ತಮಿಳಿನಲ್ಲೂ ಬಿಜಿಯಾಗಿದ್ದಾರೆ. ‘ಏಸ್’ ಮೂಲಕ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಅವರು, ‘ಅಪ್ಪುಡೊ ಇಪ್ಪುಡೊ ಎಪ್ಪುಡೊ’ ಮೂಲಕ ಟಾಲಿವುಡ್‌ಗೂ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ‘ಕಾರ್ತಿಕೇಯ’ ಸರಣಿ ಖ್ಯಾತಿಯ ನಾಯಕ ನಿಖಿಲ್ ಸಿದ್ಧಾರ್ಥ್‌ಗೆ ಜೋಡಿಯಾಗಿದ್ದಾರೆ. ಸುಧೀರ್ ಕೆ.ವರ್ಮಾ ನಿರ್ದೇಶನದ ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರದಲ್ಲಿ ರುಕ್ಮಿಣಿ, ತಾರಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಳೆ ಈ ಸಿನಿಮಾ ಬಿಡುಗಡೆಯಾಗಲಿದ್ದು, ರುಕ್ಮಿಣಿ ಸದ್ಯ ಹೈದರಾಬಾದ್‌ನಲ್ಲಿ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.
ಹ್ಯಾಟ್ರಿಕ್ ಹೀರೋಗೆ ಜೋಡಿ:
‘ಬಘೀರ’ ಯಶಸ್ಸಿನ ಬಳಿಕ ರುಕ್ಮಿಣಿ ವಸಂತ್ ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ನಲ್ಲಿ ರುಕ್ಮಿಣಿ ಶಿವರಾಜಕುಮಾರ್‌ಗೆ ಜೋಡಿಯಾಗಿದ್ದಾರೆ. ಈ ಚಿತ್ರ ಮುಂದಿನ ವಾರ ಅಂದರೆ, ನ.15ರಂದು ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಟ್ರೇಲರ್ ಹಾಗೂ ಸಾಂಗ್ ಮೂಲಕ ಸಿನಿಮಾ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದಲ್ಲೂ ರುಕ್ಮಿಣಿ ವೈದ್ಯೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಮಫ್ತಿ’ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’ ಪ್ಯಾನ್ ಇಂಡಿಯಾ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಮೂಡಿಬರಲಿದೆ.