

ಬಾಲಿವುಡ್‌ನಲ್ಲಿ ಮಿಂಚಿರುವ ನಟಿಯರ ಪುತ್ರಿಯರು ಚಿತ್ರರಂಗಕ್ಕೆ ಬಂದ ಉದಾಹರಣೆ ಸಾಕಷ್ಟಿವೆ. ಶ್ರೀದೇವಿ ಪುತ್ರಿಯರಾದ ಜಾಹ್ನವಿ ಕಪೂರ್, ಖುಷಿ ಕಪೂರ್, ಅಮೃತಾ ಸಿಂಗ್ ಪುತ್ರಿ ಸಾರಾ ಅಲಿ ಖಾನ್ ಈಗಾಗಲೇ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇದೀಗ, ಈ ಸಾಲಿಗೆ ಹೊಸ ಸೇರ್ಪಡೆ ನಟಿ ರವೀನಾ ಟಂಡನ್ ಪುತ್ರಿ ರಾಷಾ ತದಾನಿ. ಅಭಿಷೇಕ್ ಕಪೂರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಐತಿಹಾಸಿಕ ‘ಆಜಾದ್’ ಚಿತ್ರದ ಮೂಲಕ ರಾಷಾ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಜತೆ ಬಾಲಿವುಡ್ ನಟ ಅಜಯ್ ದೇವ್ಗನ್ ಸಂಬಂಧಿ ಅಮಾನ್ ದೇವ್ಗನ್ ಕೂಡ ಡೆಬ್ಯೂ ಮಾಡುತ್ತಿದ್ದಾರೆ. ಇದೊಂದು ಸ್ವಾತಂತ್ರ್ಯಪೂರ್ವ ಕಥೆಯಾಗಿದ್ದು, ಅಮಾನ್, ರಾಷಾ ಜತೆ ಅಜಯ್ ದೇವ್ಗನ್ ಸಹ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ‘ಆಜಾದ್’ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ಹಲ್ದಿಘಾಟ್ ಎಂಬ ಊರಿನಿಂದ ಆರಂಭವಾಗುವ ಕಥೆ, ಬಳಿಕ ಮಹಾರಾಣಾ ಪ್ರತಾಪ್ ಸೈನ್ಯ, ನಂಬಿಕಸ್ಥ ಕುದುರೆಯ ಸುತ್ತ ಸಾಗುತ್ತದೆ. ಟೀಸರ್‌ನಲ್ಲಿ ರವೀನಾ ಪುತ್ರಿ ರಾಷಾ ಅವರನ್ನು ಎರಡು ದೃಶ್ಯಗಳಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. ಅಮಾನ್ ಕೂಡ ಕುದುರೆ ಸವಾರಿಯ ಸಾಹಸ ದೃಶ್ಯಗಳಲ್ಲಿ ಮಿಂಚಿದ್ದಾರೆ. 2025ರ ಜನವರಿಗೆ ಸಿನಿಮಾ ತೆರೆ ಮೇಲೆ ಬರಲಿದೆ- ಏಜೆನ್ಸೀಸ್