

Virat Kohli : ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ನವೆಂಬರ್ 22 ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಾಗಲೇ ಟೀಮ್ ಇಂಡಿಯಾ ಆಟಗಾರರು ತಮ್ಮ ತರಬೇತಿ ಆರಂಭಿಸಿದ್ದಾರೆ.
ದಾಖಲೆಗಳ ಸರದಾರ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಬಗ್ಗೆ ನಾವಿಲ್ಲಿ ವಿಶೇಷವಾಗಿ ಹೇಳಲೇಬೇಕು. ಪರ್ತ್ ಮೈದಾನದಲ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. ಆದರೂ, ಪ್ರಸ್ತುತ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಫಾರ್ಮ್ನಲ್ಲಿ ಎಡವಿರುವುದು ಗೊತ್ತೇ ಇದೆ. ಇದು ತಂಡಕ್ಕೆ ಚಿಂತಿಸುವ ವಿಷಯವಾದರೂ ಆಸಿಸ್ ನೆಲದಲ್ಲಿ ಮತ್ತೆ ಪುಟಿದೇಳಲಿದ್ದಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಈಗಾಗಲೇ ಭವಿಷ್ಯ ನುಡಿದಿದ್ದಾರೆ.
ರನ್‌ಗಳ ಸುನಾಮಿಯೊಂದಿಗೆ ಈಗಾಗಲೇ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆಗಾಗಿ ಕಾಯುತ್ತಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೇವಲ 21 ರನ್ ಗಳಿಸಿದರೆ, ಈ ಟ್ರೋಫಿಯಲ್ಲಿ 2,000 ರನ್‌ಗಳ ಮೈಲುಗಲ್ಲನ್ನು ತಲುಪಿದ ಏಳನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ ಕೊಹ್ಲಿ.
ಬಾರ್ಡರ್ ಗವಾಸ್ಕರ್ ಟ್ರೋಫಿಗಳಲ್ಲಿ ಇದುವರೆಗೂ 24 ಟೆಸ್ಟ್‌ಗಳಲ್ಲಿ 42 ಇನ್ನಿಂಗ್ಸ್ ಆಡಿರುವ ಕೊಹ್ಲಿ 48.26 ಸರಾಸರಿಯಲ್ಲಿ 1979 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕ ಹಾಗೂ 5 ಅರ್ಧ ಶತಕಗಳಿವೆ. ಕೊಹ್ಲಿಗಿಂತ ಮೊದಲು ಕೇವಲ ನಾಲ್ವರು ಭಾರತೀಯ ಕ್ರಿಕೆಟಿಗರು ಮಾತ್ರ ಈ ಸಾಧನೆ ಮಾಡಿದ್ದಾರೆ.
3,262 ರನ್ಗಳೊಂದಿಗೆ ಕ್ರಿಕೆಟ್ ದಂತಕತೆ ಸಚಿನ್ ಮೊದಲ ಸ್ಥಾನದಲ್ಲಿದ್ದರೆ, ಆಸಿಸ್ ದಿಗ್ಗಜ ಆಟಗಾರ ರಿಕ್ಕಿ ಪಾಂಟಿಂಗ್ 2555 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಮೂರನೇ ಸ್ಥಾನದಲ್ಲಿ ವಿವಿಎಸ್ ಲಕ್ಷ್ಮಣ್ (2434 ರನ್), ನಾಲ್ಕನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ (2143 ರನ್) ಐದನೇ ಸ್ಥಾನದಲ್ಲಿ ಮೈಕಲ್ ಕ್ಲಾರ್ಕ್ (2049 ರನ್) ಆರನೇ ಸ್ಥಾನದಲ್ಲಿ ಚೇತೇಶ್ವರ ಪೂಜಾರಾ (2033 ರನ್) ಹಾಗೂ ಏಳನೇ ಸ್ಥಾನದಲ್ಲಿ 1979 ರನ್ಗಳೊಂದಿಗೆ ಕೊಹ್ಲಿ ಇದಾರೆ.
ಶುಕ್ರವಾರದಿಂದ ಆರಂಭವಾಗುವ ಟ್ರೋಫಿಯಲ್ಲಿ ಕೊಹ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದರೆ ಎಲ್ಲರನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರುವ ಅವಕಾಶವಿದೆ. ಹೀಗಾಗಿ ಎಲ್ಲರ ಕಣ್ಣು ಇದೀಗ ಕೊಹ್ಲಿಯ ಆಟದ ಮೇಲಿದೆ. ಅಂದಹಾಗೆ ವಿರಾಟ್ ಕೊಹ್ಲಿ ಆಸೀಸ್ ನೆಲದಲ್ಲಿ ಟೆಸ್ಟ್‌ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿರುವ ವಿರಾಟ್ 54.08 ಸರಾಸರಿಯಲ್ಲಿ 1352 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಸೇರಿವೆ. ಟೀಮ್ ಇಂಡಿಯಾ ನಾಯಕನಾಗಿ 2018-19ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡಕ್ಕೆ ಸರಣಿ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಕೊಹ್ಲಿ ಅವರದು. ಹೀಗಾಗಿ ಕೊಹ್ಲಿ ಅಂದರೆ, ಆಸಿಸ್ ಕ್ರಿಕೆಟಿಗರು ಹೆದರುತ್ತಾರೆ. (ಏಜೆನ್ಸೀಸ್)