

Smriti Mandhana : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಬಿಗ್ ಬ್ಯಾಷ್ ಲೀಗ್ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ವುಮೆನ್ ಸ್ಮೃತಿ ಮಂದಾನ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಡಿಲೇಡ್ ಸ್ಟ್ರೈಕರ್ಸ್ ತಂಡದ ಪರ ಆಡುತ್ತಿರುವ ಸ್ಮೃತಿ ಮಂದನಾ, ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಫೀಲ್ಡಿಂಗ್ ಕೌಶಲ್ಯವನ್ನು ತೋರಿದರು. ಈ ಪಂದ್ಯದಲ್ಲಿ ಮಂದಾನ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ನಲ್ಲಿಯೂ ಮಿಂಚಿದರು.
ಸ್ಕಾರ್ಚರ್ಸ್ ಇನ್ನಿಂಗ್ಸ್‌ನ 15ನೇ ಓವರ್‌ನ ಮೊದಲ ಎಸೆತದಲ್ಲಿ, ಲೀಸನ್ ಅವರು ಕವರ್ಸ್ ಕಡೆಗೆ ಶಾಟ್ ಆಡಿದರು. ಈ ವೇಳೆ ಮಂದನಾ ಓಡಿ ಹೋಗಿ ಕ್ಯಾಚ್ ಹಿಡಿದು ನೆಲಕ್ಕೆ ಬಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಕೂಡ ಈ ಕ್ಯಾಚ್ ಅನ್ನು ಕೊಂಡಾಡುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬಂದರೆ, ಪರ್ತ್ ಸ್ಕಾರ್ಚರ್ಸ್ ತಂಡದ ನಾಯಕಿ ಸೋಫಿ ಡಿವೈನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬಳಿಕ ಅಡಿಲೇಡ್ ಸ್ಟ್ರೈಕರ್ಸ್ ತಂಡದಿಂದ ಸ್ಮೃತಿ ಮಂದಾನ ಆರಂಭಿಕ ಆಟಗಾರ್ತಿಯಾಗಿ ಕಣಕ್ಕೆ ಇಳಿದರು. ಮಂದಾನ ಕೇವಲ 29 ಎಸೆತಗಳಲ್ಲಿ 41 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಸ್ಮೃತಿ ಮಂದಾನ ಈ ಸೀಸನ್ನಲ್ಲಿ 5 ಪಂದ್ಯಗಳಲ್ಲಿ 28.80 ಸರಾಸರಿಯಲ್ಲಿ 144 ರನ್ ಗಳಿಸಿದ್ದಾರೆ. ಇದರಲ್ಲಿ ಅರ್ಧಶತಕವೂ ಇದೆ.
ಈ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಮಂದಾನ ಅವರ 41 ರನ್‌ಗಳ ಜೊತೆಗೆ ಕೇಟಿ ಮ್ಯಾಕ್ 34 ಎಸೆತಗಳಲ್ಲಿ 41 ರನ್ ಮತ್ತು ಲಾರಾ ವೊಲ್ವಾರ್ಟ್ 28 ಎಸೆತಗಳಲ್ಲಿ 48 ರನ್ ಗಳಿಸಿದರು. ಬಳಿಕ ಬ್ಯಾಟಿಂಗ್ಗೆ ಬಂದ ಪರ್ತ್ ತಂಡ 8 ವಿಕೆಟ್ ಕಳೆದುಕೊಂಡು 139 ರನ್ ಮಾತ್ರ ಗಳಿಸಿ, ಸೋಲಿಗೆ ಶರಣಾಯಿತು. (ಏಜೆನ್ಸೀಸ್)