

ಮೆಲ್ಬೋರ್ನ್: ಆಸ್ಟ್ರೇಲಿಯಾ ನೆಲದಲ್ಲಿ ರನ್ ಮೆಶಿನ್ ಮತ್ತು ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ( Virat Kohli ) ಪ್ರಾಬಲ್ಯ ಏನು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಅಲ್ಲಿ ಆಡಿದ 13 ಟೆಸ್ಟ್ಗಳಲ್ಲಿ ಕೊಹ್ಲಿ 54.08 ಸರಾಸರಿಯಲ್ಲಿ 1352 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಸೇರಿವೆ.
ಟೀಮ್ ಇಂಡಿಯಾ ನಾಯಕನಾಗಿ 2018-19ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡಕ್ಕೆ ಸರಣಿ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಕೊಹ್ಲಿ ಅವರದು. ಹೀಗಾಗಿ ಕೊಹ್ಲಿ ಅಂದರೆ, ಆಸಿಸ್ ಕ್ರಿಕೆಟಿಗರು ಹೆದರುತ್ತಾರೆ. ಆದರೆ, ಕೊಹ್ಲಿ ಇತ್ತೀಚೆಗೆ ಫಾರ್ಮ್ನಲ್ಲಿಲ್ಲ. ಆಸೀಸ್ ದೃಷ್ಟಿಯಲ್ಲಿ ಅವರೇ ಪ್ರಮುಖ ಬ್ಯಾಟ್ಸ್ಮನ್. ಮೈದಾನದಲ್ಲಿ ಕೊಹ್ಲಿಯನ್ನು ಕಟ್ಟಿಹಾಕಿದರೆ, ಭಾರತವನ್ನು ಸುಲಭವಾಗಿ ಸೋಲಿಸಬಹುದು ಎಂದು ಆಸಿಸ್ ಮಾಜಿ ಆಟಗಾರರಿಗೂ ಗೊತ್ತಿದೆ. ಅದಕ್ಕಾಗಿಯೇ ಲೆಜೆಂಡರಿ ವೇಗಿ ಗ್ಲೆನ್ ಮೆಕ್ಗ್ರಾತ್ ತಮ್ಮ ಬೌಲರ್ಗಳಿಗೆ ಕೊಹ್ಲಿ ಮೇಲೆ ಒತ್ತಡವನ್ನು ಹೆಚ್ಚಿಸಿ ಮತ್ತು ಆತನ ಭಾವನೆಗಳೊಂದಿಗೆ ಆಡುವಂತೆ ಸಲಹೆ ನೀಡಿದ್ದಾರೆ.
ಇತ್ತೀಚೆಗೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಎದುರಾದ ಸೋಲು ಇನ್ನೂ ಕೊಹ್ಲಿಯ ಮನಸ್ಸಿನಲ್ಲಿ ಉಳಿದಿರುತ್ತದೆ. ಅದನ್ನೇ ಮುಂದುವರಿಸಬೇಕು ಎಂದು ಮೆಕ್ಗ್ರಾತ್ ಹೇಳಿದರು. ಟೀಮ್ ಇಂಡಿಯಾ ತನ್ನ ತವರಿನಲ್ಲಿ 0-3 ಅಂತರದಲ್ಲಿ ಸೋತಿದ್ದು, ಇದರಿಂದ ಖಂಡಿತವಾಗಿಯೂ ನಮಗೆ ಲಾಭವಾಗಲಿದೆ. ಹಾಗಾಗಿ ಭಾರತದ ಮೇಲೆ ಒತ್ತಡ ಹೇರಬೇಕು. ಅದರಲ್ಲೂ ವಿರಾಟ್ ಕೊಹ್ಲಿ ಮೇಲೆ ಇದೇ ವಿಧಾನವನ್ನು ಅನುಸರಿಸಬೇಕು ಎಂದು ಆಸಿಸ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮೆಕ್ಗ್ರಾತ್ ಹೇಳಿದ್ದಾರೆ.
ಆದರೆ, ಕೊಹ್ಲಿಯನ್ನು ಕೆರಳಿಸಿದರೆ ಮತ್ತಷ್ಟು ಆಕ್ರಮಣಕಾರಿಯಾಗುವ ಅಪಾಯವಿದೆ ಎಂದು ಆಸೀಸ್ ಮಾಜಿ ವೇಗಿ ಸಣ್ಣ ಎಚ್ಚರಿಕೆಯನ್ನೂ ನೀಡಿದ್ದಾರೆ. ಆಸ್ಟ್ರೇಲಿಯಾದ ಬೌಲರ್ಗಳು ಪದೇ ಪದೇ ಕೊಹ್ಲಿಯನ್ನು ಗುರಿಯಾಗಿಸಿಕೊಂಡರೆ, ಅವರು ಕೂಡ ಸಿದ್ಧರಾಗುತ್ತಾರೆ. ಇದರಿಂದ ಅತ್ಯುತ್ತಮ ಆಟವನ್ನು ಸಹ ಹೊರತರಬಹುದು ಎಂದರು.
ಸರಣಿಯ ಆರಂಭದಲ್ಲೇ ಕಡಿಮೆ ಸ್ಕೋರ್ಗಳಿಗೆ ಅಂಟಿಕೊಂಡರೆ, ಕೊಹ್ಲಿ ಚೇತರಿಸಿಕೊಳ್ಳುವುದು ಸಹ ಕಷ್ಟವಾಗುತ್ತದೆ. ನನ್ನ ದೃಷ್ಟಿಯಲ್ಲಿ ಕೊಹ್ಲಿ ಹೆಚ್ಚು ಭಾವನಾತ್ಮಕ. ಚೆನ್ನಾಗಿ ಆಡಲು ಪ್ರಾರಂಭಿಸಿದರೆ, ಆತ ಎಂದಿಗೂ ನಿಲ್ಲುವುದಿಲ್ಲ. ಅದು ವಿಫಲವಾದರೆ, ಅದು ಮುಂದುವರಿಯುತ್ತದೆ. ಹೀಗಾಗಿ ಕೊಹ್ಲಿಯ ಮೇಲೆ ಹೆಚ್ಚು ಒತ್ತಡ ಹಾಕಿ, ಭಾವನೆಗಳೊಂದಿಗೆ ಆಟವಾಡಿ ಎಂದು ಮೆಕ್ಗ್ರಾತ್ ಸಲಹೆ ನೀಡಿದ್ದಾರೆ.
ಅಂದಹಾಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಎದುರಿಸಲು ಆಸ್ಟ್ರೇಲಿಯಾ ಸಜ್ಜಾಗಿದೆ. ಕಳೆದೆರಡು ಬಾರಿ ತಮ್ಮದೇ ನೆಲದಲ್ಲಿ ಭಾರತದ ವಿರುದ್ಧ ಸರಣಿ ಸೋತಿರುವ ಆಸೀಸ್, ಈ ಬಾರಿ ಯಾವ ಬೆಲೆ ತೆತ್ತಾದರೂ ಟ್ರೋಫಿಗೆ ಮುತ್ತಿಕ್ಕುವ ಸಂಕಲ್ಪ ತೊಟ್ಟಿದೆ. ಈ ಪ್ರತಿಷ್ಠಿತ ಸರಣಿಯ ಭಾಗವಾಗಿ ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ನವೆಂಬರ್ 22 ರಿಂದ ಆರಂಭವಾಗಲಿದೆ. (ಏಜೆನ್ಸೀಸ್)