ಹುಷಾರಾಗಿರಿ​ ಆಸ್ಟ್ರೇಲಿಯಾ ಸೋಲಿಸಲು ಆತನೊಬ್ಬನೇ ಸಾಕು! ಡೇವಿಡ್​ ವಾರ್ನರ್​ ಹೇಳಿಕೆ ವೈರಲ್​! David Warner

David Warner
Published on

David Warner : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಪ್ರತಿಷ್ಠಿತ ಟ್ರೋಫಿಯ ಭಾಗವಾಗಿ ಮೊದಲ ಟೆಸ್ಟ್ ನವೆಂಬರ್ 22ರಿಂದ ಪರ್ತ್ ಮೈದಾನದಲ್ಲಿ ಆರಂಭವಾಗಲಿದೆ. ಈಗಾಗಲೇ ಮೊದಲ ಟೆಸ್ಟ್‌ಗಾಗಿ ಪರ್ತ್‌ ತಲುಪಿರುವ ಉಭಯ ತಂಡಗಳು ನೆಟ್ಸ್‌ನಲ್ಲಿ ಕಸರತ್ತು ನಡೆಸುತ್ತಿವೆ.

ಮೊದಲ ಟೆಸ್ಟ್​ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಮ್ಮ ತಂಡಕ್ಕೆ ಖಡಕ್​ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಜೊತೆ ಎಚ್ಚರಿಕೆಯಿಂದ ಇರುವಂತೆ ಪ್ಯಾಟ್​ ಕಮ್ಮಿನ್ಸ್ ನೇತೃತ್ವದ ಆಸಿಸ್​ ತಂಡಕ್ಕೆ ವಾರ್ನರ್ ಸಲಹೆ ನೀಡಿದ್ದಾರೆ.

ಬಾರ್ಡರ್​-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಸಿಡಿದೇಳಿದರೆ ಸಾಕು ಭಾರತಕ್ಕೆ ಗೆಲುವು ದಕ್ಕುವುದು ಖಂಡಿತ. ಅದರಲ್ಲೂ ವಿಶೇಷವಾಗಿ ಆಸ್ಟ್ರೇಲಿಯಾ ನೆಲದಲ್ಲಿ ಅವರನ್ನು ತಡೆಯುವುದು ಸುಲಭವಲ್ಲ. ಕೊಹ್ಲಿ ಅವರು ಯಾವಾಗಲೂ ರನ್‌ಗಳ ಹಸಿವಿನಿಂದ ಬಳಲುತ್ತಿರುತ್ತಾರೆ. ಆಸೀಸ್ ನೆಲದಲ್ಲಿ ಅವರನ್ನು ಸೋಲಿಸುವ ಇನ್ನೊಬ್ಬ ಆಟಗಾರ ಸದ್ಯಕ್ಕೆ ಇಲ್ಲ. ಟೀಕಾಕಾರರ ಬಾಯಿ ಮುಚ್ಚಿಸಲು ಕೊಹ್ಲಿ ಅವರಿಗೆ ಇದು ಸರಿಯಾದ ಸಮಯ ಎಂದು ವಾರ್ನರ್​ ಹೇಳಿದ್ದಾರೆ.

ಈ ಸರಣಿಯಲ್ಲಿ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತೇನೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ವಿರಾಟ್​ನಿಂದ ಖಂಡಿತಾ ಬೆದರಿಕೆ ಇದೆ. ಕೊಹ್ಲಿ ಫಾರ್ಮ್ ಬಗ್ಗೆ ನಾನು ಚಿಂತಿಸುವುದಿಲ್ಲ. ಏಕೆಂದರೆ ದೊಡ್ಡ ಸರಣಿಗಳಲ್ಲಿ ಹೇಗೆ ಆಡಬೇಕೆಂದು ಕೊಹ್ಲಿಗೆ ಚೆನ್ನಾಗಿ ತಿಳಿದಿದೆ ಎಂದು ಡೇವಿಡ್ ವಾರ್ನರ್​ ಅವರು ಹೆರಾಲ್ಡ್ ಸನ್ ಅಂಕಣದಲ್ಲಿ ಬರೆದಿದ್ದಾರೆ.

ಅಂದಹಾಗೆ ವಿರಾಟ್ ಕೊಹ್ಲಿ ಆಸೀಸ್ ನೆಲದಲ್ಲಿ ಟೆಸ್ಟ್‌ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿರುವ ವಿರಾಟ್ 54.08 ಸರಾಸರಿಯಲ್ಲಿ 1352 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಸೇರಿವೆ. ಟೀಮ್​ ಇಂಡಿಯಾ ನಾಯಕನಾಗಿ 2018-19ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡಕ್ಕೆ ಸರಣಿ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಕೊಹ್ಲಿ ಅವರದು. ಹೀಗಾಗಿ ಕೊಹ್ಲಿ ಅಂದರೆ, ಆಸಿಸ್​ ಕ್ರಿಕೆಟಿಗರು ಹೆದರುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net