

Kanguva : ಕಾಲಿವುಡ್ ಸೂಪರ್ಸ್ಟಾರ್ ಸೂರ್ಯ ಅಭಿನಯದ ಬಹು ನಿರೀಕ್ಷಿತ ಕಂಗುವಾ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಸಿರುತೈ ಶಿವ ನಿರ್ದೇಶನದ ಈ ಚಿತ್ರವನ್ನು ಸ್ಟುಡಿಯೋ ಗ್ರೀನ್ ಜ್ಞಾನವೇಲ್ ರಾಜ ನಿರ್ಮಿಸಿದ್ದಾರೆ. ಬಿಗ್ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೇ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಕೆಲವರು ಚಿತ್ರದ ಬಗ್ಗೆ ನೆಗಿಟಿವ್ ಪ್ರಚಾರಗಳನ್ನು ಮಾಡುತ್ತಿದ್ದಾರೆ.
ನೆಗೆಟಿವ್ ಪ್ರಚಾರವನ್ನು ಖಂಡಿಸಿ ನಟಿ ಹಾಗೂ ಸೂರ್ಯ ಪತ್ನಿ ಜ್ಯೋತಿಕಾ ಕೂಡ ಪೋಸ್ಟ್ ಹಾಕಿದ್ದರು. ಉದ್ದೇಶಪೂರ್ವಕವಾಗಿ ಕಂಗುವಾ ಚಿತ್ರದ ಬಗ್ಗೆ ನಕಾರಾತ್ಮಕ ವಿಮರ್ಶೆಗಳನ್ನು ಹಾಕಲಾಗಿದೆ ಎಂದಿದ್ದಾರೆ. ಆದರೆ, ಜ್ಯೋತಿಕಾರನ್ನು ಸಹ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ನೆಗೆಟಿವ್ ಪ್ರಚಾರ ಮಾಡಿದರೆ, ಇನ್ನು ಕೆಲವರು ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಕೂಡ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಸಾಕಷ್ಟು ನೆಗೆಟಿವ್ ಪ್ರಚಾರದ ನಡುವೆಯೂ ಕಂಗುವಾ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಮೂರೇ ದಿನಕ್ಕೆ ಈ ಸಿನಿಮಾ 100 ಕೋಟಿ ರೂ. ಕ್ಲಬ್ಗೆ ಸೇರಿದೆ. ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಈ ಸಿನಿಮಾ ಮೂರೇ ದಿನದಲ್ಲಿ ವಿಶ್ವದಾದ್ಯಂತ 127 ಕೋಟಿ ರೂ. ಗಳಿಕೆ ಮಾಡಿದೆ.
ಇನ್ನು ಸಿನಿಮಾ ಮೂಲಗಳ ಪ್ರಕಾರ ಕಂಗುವಾ ಸಿನಿಮಾ 4 ದಿನದಲ್ಲಿ 140 ಕೋಟಿ ರೂ.ಗೂ ಅಧಿಕ ಹಣ ಗಳಿಕೆ ಮಾಡಿದೆ. ಓಪನಿಂಗ್ ದಿನದಲ್ಲಿ ಅಬ್ಬರಿಸಿದ್ದ ಕಂಗುವಾ ಎರಡನೇ ದಿನದಲ್ಲಿ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. ಆದರೆ, ಮೂರನೇ ದಿನ ಮತ್ತೆ ಬಾಕ್ಸ್ಆಫೀಸ್ನಲ್ಲಿ ಚೇತರಿಸಿಕೊಂಡಿದ್ದು, ಯಶಸ್ಸಿನತ್ತ ಸಾಗುತ್ತಿದೆ. ಸಾಕಷ್ಟು ನೆಗೆಟಿವ್ ಪ್ರಚಾರದ ನಡುವೆ ಕಂಗುವಾ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಶಿವ ನಿರ್ದೇಶನದ ಈ ಬೃಹತ್ ಆಕ್ಷನ್ ಚಿತ್ರದಲ್ಲಿ ದಿಶಾ ಪಟಾನಿ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. (ಏಜೆನ್ಸೀಸ್)