

ನವದೆಹಲಿ: ಚಂದ್ರಯಾನ-3 ಮಿಷನ್ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮಾಡಿದೆ. ಚಂದ್ರನ ಅಂಗಳದಲ್ಲಿರುವ ವಿಕ್ರಮ್ ಲ್ಯಾಂಡರ್, ತನ್ನ ಲ್ಯಾಂಡಿಂಗ್ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಿಗಿದಿದೆ. ಚಂದ್ರನ ಮೇಲ್ಮೈಯಲ್ಲಿನಲ್ಲಿ ಕುಪ್ಪಳಿಸುವ ಅಥವಾ ಹಾರುವ ತನ್ನ ಪ್ರಯೋಗವನ್ನು ಯಶಸ್ವಿಯಾಗಿ ನಡೆಸುವ ಮೂಲಕ ತನ್ನ ಮಿಷನ್ ಉದ್ದೇಶಗಳನ್ನೂ ಚಂದ್ರಯಾನ-3 ಮೀರಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಸೂಚನೆ ಮೇರೆಗೆ ವಿಕ್ರಮ್ ಲ್ಯಾಂಡರ್ ತನ್ನ ಇಂಜಿನ್‌ಗಳನ್ನು ಉರಿಸಿ, ಸುಮಾರು 40 ಸೆಂ.ಮೀ ಎತ್ತರಕ್ಕೆ ಹಾರಿತು ಮತ್ತು 30 ರಿಂದ 40 ಸೆಂ.ಮೀ ದೂರದಲ್ಲಿ ಮತ್ತೊಮ್ಮೆ ಸುರಕ್ಷಿತವಾಗಿ ಸಾಫ್ಟ್ ಲ್ಯಾಂಡ್ ಆಯಿತು ಎಂದು ಇಸ್ರೋ ಹೇಳಿದೆ. ಅಲ್ಲದೆ, ಎಕ್ಸ್ (ಟ್ವಿಟರ್)ನಲ್ಲಿ ವಿಡಿಯೋ ಸಹ ಹಂಚಿಕೊಂಡಿದೆ.
ಬಾಹ್ಯಾಕಾಶ ಯೋಜನೆಯಲ್ಲಿ ನಿಜಕ್ಕೂ ಇದೊಂದು ದೊಡ್ಡ ಮೈಲಿಗಲ್ಲು ಆಗಲಿದೆ. ಏಕೆಂದರೆ, ಮುಂದಿನ ದಿನಗಳಲ್ಲಿ ಮಾನವರನ್ನು ಚಂದ್ರನ ಅಂಗಳಕ್ಕೆ ಇಳಿಸಿದಾಗ ಅವರನ್ನು ಮತ್ತೆ ವಾಪಸ್ಸು ಕರೆತರಲು ಈ ಮಹತ್ವದ ಸಾಧನೆಯು ಪ್ರಮುಖ ಉತ್ತೇಜನವಾಗಿದೆ. ಚಂದ್ರನ ಮೇಲೆ ಮತ್ತೆ ಹಾರುವ ಅಥವಾ ಜಿಗಿಯುವ ಪ್ರಯೋಗದ ಯಶಸ್ವಿಯು ವಿಕ್ರಮ್ ಲ್ಯಾಂಡರ್, ಚಂದ್ರನ ಭೂಪ್ರದೇಶದಲ್ಲಿ ಚಲಿಸುವ ಮತ್ತು ನ್ಯಾವಿಗೇಟ್ ಮಾಡುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಇದು ಭವಿಷ್ಯದ ಪರಿಶೋಧನಾ ಕಾರ್ಯಾಚರಣೆಗಳಿಗೆ ನಿರ್ಣಾಯಕ ಸಾಮರ್ಥ್ಯವಾಗಿದೆ.
ಪ್ರಸ್ತುತ ಚಂದ್ರಯಾನ 3 ಸಿಸ್ಟಮ್ಗಳು ಯಶಸ್ವಿಯಾಗಿ ನಿರ್ವಹಿಸಲ್ಪಡುತ್ತಿವೆ ಮತ್ತು ಸ್ಥಿರವಾಗಿವೆ. ನಿಯೋಜಿತ ರ್‍ಯಾಂಪ್, ChaSTE ಮತ್ತು ILSA ಗಳನ್ನು ಹಿಂದಕ್ಕೆ ಮಡಚಲಾಯಿತು ಮತ್ತು ಪ್ರಯೋಗದ ನಂತರ ಯಶಸ್ವಿಯಾಗಿ ಮರುನಿಯೋಜಿಸಲಾಯಿತು ಎಂದು ಇಸ್ರೋ ಎಕ್ಸ್ನಲ್ಲಿ ತಿಳಿಸಿದೆ.
ಚಂದ್ರಯಾನ 3 ಮಿಷನ್ ಅನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಒಳಗೊಂಡಿದ್ದ ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿತು. ಈ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಮತ್ತು ಚಂದ್ರನಲ್ಲಿಗೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಯನ್ನು ಚಂದ್ರಯಾನ-3 ಗಳಿಸಿದೆ. ಚಂದ್ರನ 1 ದಿನ ಭೂಮಿಯ 14ಕ್ಕೆ ಸಮನಾಗಿದ್ದು, 14 ದಿನ ಚಂದ್ರನ ಅಂಗಳದಲ್ಲಿ ಕಾರ್ಯಾಚರಣೆ ನಡೆಸಿದ ಪ್ರಗ್ಯಾನ್ ರೋವರ್ ಇದೀಗ ಸ್ತಬ್ಧವಾಗಿದೆ. ಸೆ. 22ಕ್ಕೆ ಮತ್ತೆ ಕಾರ್ಯಾಚರಣೆ ಆರಂಭಿಸಬಹುದು ಎಂದು ಇಸ್ರೋ ಹೇಳಿದೆ. ಚಂದ್ರನ ಮೇಲೆ ಸಲ್ಫರ್ ಸೇರಿದಂತೆ ಅನೇಕ ಅಂಶಗಳು ಇರುವುದನ್ನು ಪ್ರಗ್ಯಾನ್ ರೋವರ್ ಪತ್ತೆಹಚ್ಚಿದೆ. (ಏಜೆನ್ಸೀಸ್)