

ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಕೆಂಡಸಂಪಿಗೆ’, ‘ಕಾಲೇಜ್ ಕುಮಾರ’ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದ ವಿಕ್ಕಿ ವರುಣ್, ಆ್ಯಕ್ಷನ್-ಕಟ್ ಹೇಳಿರುವ ಮೊದಲ ಚಿತ್ರ ‘ಕಾಲಾಪತ್ಥರ್’. ಈ ಚಿತ್ರಕ್ಕೆ ಅವರೇ ನಾಯಕನಾಗಿದ್ದು, ಅವರಿಗೆ ಧನ್ಯಾ ರಾಮ್‌ಕುಮಾರ್ ಜೋಡಿಯಾಗಿದ್ದಾರೆ. ಇತ್ತೀಚೆಗಷ್ಟೆ ‘ಸೌಂಡ್ಸ್ ಆ್ ಕಾಲಾಪತ್ಥರ್’ ಎಂಬ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ.
ಚೊಚ್ಚಲ ನಿರ್ದೇಶನದ ಬಗ್ಗೆ ವಿಕ್ಕಿ ವರುಣ್, ‘ನಿರ್ದೇಶನ ನನ್ನ ಕನಸು. ಈ ಮೂಲಕ ಅದು ನನಸಾಗುತ್ತಿದೆ. ನಿರ್ದೇಶನ ಮತ್ತು ನಟನೆ ಎರಡನ್ನೂ ಒಟ್ಟಿಗೆ ನಿಭಾಯಿಸುವುದು ಸ್ವಲ್ಪ ಕಷ್ಟವಾಯಿತು. ಚಿತ್ರದ ಶೀರ್ಷಿಕೆ ಬಗ್ಗೆ ಜಾಸ್ತಿ ವಿವರಣೆ ನೀಡುವುದಿಲ್ಲ. ಏಕೆಂದರೆ ಅದನ್ನು ಹೇಳಿದರೆ ಸಿನಿಮಾದ ಕಥೆಯನ್ನೇ ಹೇಳಿದಂತಾಗುತ್ತದೆ’ ಎಂದು ಮಾಹಿತಿ ನೀಡಿದರು. ಇನ್ನು ಚಿತ್ರದಲ್ಲಿ ಐದು ಹಾಡುಗಳಿದ್ದು, ‘ವಿ. ನಾಗೇಂದ್ರ ಪ್ರಸಾದ್ ಹಾಗೂ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್, ಸಾಯಿ ವಿಘ್ನೇಶ್ ಅಭಿಷೇಕ್, ಐಶ್ವರ್ಯಾ ರಂಗರಾಜನ್, ಶಿವಾನಿ ಹಾಗೂ ಸಿದ್ಧಾರ್ಥ್ ಬೆಳ್ಮಣ್ಣು ಹಾಡಿದ್ದಾರೆ’ ಎಂದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹೇಳಿಕೊಂಡರು.
ನಾಯಕಿ ಧನ್ಯಾ ರಾಮ್‌ಕುಮಾರ್, ‘ಗಂಗಾ ಎಂಬ ಶಿಕ್ಷಕಿಯ ಪಾತ್ರ ಮಾಡುತ್ತಿದ್ದೇನೆ. ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಹೇಳಿದರು. ಸದ್ಯದಲ್ಲೆ ಚಿತ್ರವನ್ನು ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು.