

ಕರೊನಾದಿಂದ ಚಿತ್ರೀಕರಣ ಚಟುವಟಿಕೆಗಳೆಲ್ಲಾ ಬಂದ್ ಆಗಿರುವುದರಿಂದ, ನಿರ್ಮಾಪಕರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ, ದೊಡ್ಡ ಸ್ಟಾರ್ಗಳು ತಮ್ಮ ಸಂಭಾವನೆಯಲ್ಲಿ ಕಡಿತ ಮಾಡಬೇಕು ಎಂದು ಹಲವು ನಿರ್ಮಾಪಕರು, ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ತಮಿಳಿನ ಖ್ಯಾತ ನಟ ವಿಜಯ್ ಅವರು ತಮ್ಮ ಸಂಭಾವನೆಯನ್ನು ಕಡಿತಗೊಳಿಸಿದ್ದಾರೆ ಎಂಬ ಸುದ್ದಿಯೊಂದು ಕಾಲಿವುಡ್ನಲ್ಲಿ ಕಳೆದೊಂದು ತಿಂಗಳಿನಿಂದ ಕೇಳಿ ಬರುತ್ತಲೇ ಇದೆ.
ಪ್ರಮುಖವಾಗಿ ಎ.ಆರ್. ಮುರುಗದಾಸ್ ನಿರ್ದೇಶನದಲ್ಲಿ ವಿಜಯ್ ಒಂದು ಹೊಸ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತಿರುವ ವಿಷಯವೇ. ಈ ಚಿತ್ರಕ್ಕೆ ಮೊದಲು ವಿಜಯ್ 100 ಕೋಟಿಯಷ್ಟು ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಒಂದು ತಿಂಗಳ ಹಿಂದೆ, ಈ ಮೊತ್ತದಲ್ಲಿ 20 ಪರ್ಸೆಂಟ್ ಕಟ್ ಆಗಿ, 80 ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ ಎಂದು ಹೇಳಲಾಗಿತ್ತು.
ಈಗಿನ ಮಾಹಿತಿಯ ಪ್ರಕಾರ, ವಿಜಯ್ ತಮ್ಮ ಸಂಭಾವನೆಯಲ್ಲಿ ಇನ್ನಷ್ಟು ಕಡಿತಗೊಳಿಸಿದ್ದು, 70 ಕೋಟಿ ಪಡೆಯಲಿದ್ದಾರಂತೆ. ಇನ್ನು 30 ಕೋಟಿ ಕೇಳಿದ್ದ ನಿರ್ದೇಶಕ ಮುರುಗದಾಸ್, ಕೇವಲ 10 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ನಟ ಮತ್ತು ನಿರ್ದೇಶಕನ ಸಂಭಾವನೆಯೇ 80 ಕೋಟಿಯಾಗಿರುವಾಗ, ಚಿತ್ರದ ಬಜೆಟ್ ಎಷ್ಟಾಗಬಹುದು ಎಂಬ ಪ್ರಶ್ನೆ ಸಹಜ.
ಮೂಲಕಗಳ ಪ್ರಕಾರ, ಸನ್ ಪಿಕ್ಚರ್ಸ್ನವರು ನಿರ್ಮಿಸುತ್ತಿರುವ ಈ ಚಿತ್ರದ ಬಜೆಟ್ 130 ಕೋಟಿ ರೂಪಾಯಿಯಂತೆ. ಇದರಲ್ಲಿ ನಟ-ನಿರ್ದೇಶಕರ ಸಂಭಾವನೆಯನ್ನು ತೆಗೆದು ಹಾಕಿದರೆ, ಉಳಿಯುವುದು 50 ಕೋಟಿ ಮಾತ್ರ. ಆದರೂ ಚಿತ್ರದ ಬಜೆಟ್ಗಿಂಥ, ವಿಜಯ್ ಅವರ ಸಂಭಾವನೆ ಇನ್ನೂ ಹೆಚ್ಚಿರುವುದು ವಿಶೇಷವಲ್ಲದೆ ಮತ್ತಿನ್ನೇನು?
ವಿಜಯ್ ಮತ್ತು ಮುರುಗದಾಸ್ ಇದಕ್ಕೂ ಮುನ್ನ 'ತುಪಾಕಿ', 'ಕತ್ತಿ' ಮತ್ತು 'ಸರ್ಕಾರ್' ಚಿತ್ರಗಳಲ್ಲಿ ಜತೆಯಾಗಿತ್ತು. ಈ ಎಲ್ಲಾ ಚಿತ್ರಗಳು ಹಿಟ್ ಆದ ಕಾರಣ, ಈ ಹೊಸ ಚಿತ್ರದಲ್ಲಿ ವಿಜಯ್ ಮತ್ತು ಮುರುಗದಾಸ್ ಮತ್ತೊಮ್ಮೆ ಜತೆಯಾಗುತ್ತಿದ್ದಾರೆ ಎನ್ನುವುದು ವಿಶೇಷ.