

ಸುಶಾಂತ್ ಸಿಂಗ್ ರಜಪೂತ್ ಅವರ ಸಾವು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಜಿಜ್ನಾಸೆ ಎರಡು ತಿಂಗಳುಗಳಿಂದ ನಡೆಯುತ್ತಲೇ ಇದೆ. ಕೆಲವರು ಇದೊಂದು ಆತ್ಮಹತ್ಯೆ ಎಂದರೆ, ಇನ್ನೂ ಕೆಲವರು ಇದು ಪ್ರೀಪ್ಲಾನ್ಡ್ ಮರ್ಡರ್ ಎನ್ನುತ್ತಿದ್ದಾರೆ.
ಈಗ ಸುಶಾಂತ್ ಅವರ ಸ್ನೇಹಿತ ಗಣೇಶ್ ಹಿವಾರ್ಕರ್ ಎನ್ನುವವರು ಸಹ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, ತಾವು ಹಿಂದೊಮ್ಮೆ ಆತ್ಮಹತ್ಯೆಯ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾಗ, ಸ್ವತಃ ಸುಶಾಂತ್ ತಡೆದಿದ್ದರಂತೆ.
ಈ ಕುರಿತು ಮಾತನಾಡಿರುವ ಅವರು, 'ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಹಿಂದೊಮ್ಮೆ ನಾನು ಬೇಸರಗೊಂಡು ಆತ್ಮಹತ್ಯೆಗೆ ಪ್ರಯತ್ನಿಸಬೇಕು ಎಂದಿದ್ದಾಗ, ನನ್ನನ್ನು ತಡೆದವನೇ ಅವನು. ಹಾಗಿರುವಾಗ ಅವನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹೇಗೆ ಸಾಧ್ಯ' ಎಂದು ಅವರು ಪ್ರಶ್ನಿಸಿದ್ದಾರೆ.
'ನಾನು ಮತ್ತು ಸುಶಾಂತ್ ಇಬ್ಬರೂ ಡ್ಯಾನ್ಸರ್ಗಳಾಗಿ ಕೆಲಸ ಮಾಡುತ್ತಿದ್ದೆವು. ಆಗ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಅವಳು ನನ್ನನ್ನು ನಿರಾಕರಿಸಿದಾಗ, ಬಹಳ ಡಿಪ್ರೆಶನ್ಗೆ ಒಳಗಾದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಒಮ್ಮೆ ಈ ವಿಷಯವನ್ನು ಸುಶಾಂತ್ ಬಳಿ ಹೇಳಿಕೊಂಡಿದ್ದಾಗ, ನನ್ನನ್ನು ತಡೆದಿದ್ದ. ಅಷ್ಟೇ ಅಲ್ಲ, ದೊಡ್ಡ ಸಪೋರ್ಟ್ ಕೊಟ್ಟಿದ್ದ. ಬಹುಶಃ ಅವನು ಇರಲಿಲ್ಲದಿದ್ದರೆ, ನಾನು ಈಗ ಇರುತ್ತಿರಲಿಲ್ಲ' ಎಂದು ಗಣೇಶ್ ಹೇಳಿಕೊಂಡಿದ್ದಾರೆ.
ಇನ್ನು ತಮ್ಮ ಗೆಳೆತನದ ಬಗ್ಗೆ ಹೇಳಿಕೊಂಡಿರುವ ಗಣೇಶ್, 'ನಾವಿಬ್ಬರೂ ಬಹಳ ಹಳೆಯ ಸ್ನೇಹಿತರು. ಒಟ್ಟಿಗೆ ಸ್ಟ್ರಗಲ್ ಮಾಡಿದ್ದೇವೆ. ಜತೆಗೆ ಹಲವು ಶೋಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಅವನ ಸಾವಿನ ವಿಷಯ ಕೇಳಿ ನಿಜಕ್ಕೂ ಬಹಳ ನೋವಾಯಿತು. ಆ ತರಹದ ಒಬ್ಬ ಮನುಷ್ಯ ಆತ್ಮಹತ್ಯೆ ಮಾಡಿಕೊಂಡು ಸಾಯುವುದಕ್ಕೆ ಚಾನ್ಸೇ ಇಲ್ಲ' ಎಂದು ಗಣೇಶ್ ಹೇಳಿದ್ದಾರೆ.