

ಸರಿಯಾಗಿ 15 ವರ್ಷಗಳ ಹಿಂದೆ ಅಂದರೆ, 2005ರ ಆಗಸ್ಟ್ 19ರಂದು ‘ಜೋಗಿ’, ಬೆಂಗಳೂರಿನ ಕಪಾಲಿ ಸೇರಿದಂತೆ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇಂದಿಗೆ ಸರಿಯಾಗಿ 15 ವರ್ಷಗಳಾದವು. ಆ ಖುಷಿ ವಿಚಾರವನ್ನು ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.
ಶಿವರಾಜಕುಮಾರ್ ಅವರ ಅಭಿಮಾನಿಗಳು ಇಂದು ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾದ ಕಾಮನ್ ಡಿಸ್ಪ್ಲೇ ಪಿಕ್ಚರ್ (ಸಿಡಿಪಿ) ಬಿಡುಗಡೆ ಮಾಡಿಸಿದ್ದಾರೆ. ವಿಶೇಷವೆಂದರ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಈ ಸಿಡಿಪಿಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಇದೀಗ ಚಿತ್ರದ ನಿರ್ದೇಶಕ ಪ್ರೇಮ್, ಶಿವಣ್ಣ ಅವರ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿದ್ದಾರೆ. ಹೂಗುಚ್ಛ ನೀಡಿ, ಸಿಹಿ ತಿನಿಸಿ ಖುಷಿ ಹಂಚಿಕೊಂಡು ಬಂದಿದ್ದಾರೆ. ಆ ವಿಚಾರವನ್ನು ವಿಡಿಯೋ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪ್ರೇಮ್, ‘ಅಭಿನಂದನೆಗಳು ಶಿವಣ್ಣ, ಜೋಗಿ ಫೀಲ್ ಯಾವತ್ತೂ ಹೋಗದು. ಇಂದು ಸಂಜೆ 5 ಗಂಟೆಗೆ ಜೋಗಿ ಜಾತ್ರೆ ಸೆಲೆಬ್ರೇಟ್ ಮಾಡೋಣ, ಲೈವ್ ಮೂಲಕ’ ಎಂದಿದ್ದಾರೆ.
ಇತ್ತ ಶಿವಸೈನ್ಯ ಎಂಬ ಶಿವರಾಜಕುಮಾರ್ ಅವರ ಅಭಿಮಾನಿಗಳ ಸಂಘವು, ಎ2 ಯೂಟ್ಯೂಬ್ ಚಾನಲ್ನಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಬುಧವಾರ ಬೆಳಿಗ್ಗೆ ಈ ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೇ ಟ್ರೆಂಡಿಂಗ್ನಲ್ಲಿದೆ ಎನ್ನುವುದು ವಿಶೇಷ.