

ಬಾಲಿವುಡ್ನ ಒಂದು ಕಾಲದ ಸ್ಟಾರ್ಗಳ ಪೈಕಿ ಬಾಬ್ಬಿ ಡಿಯೋಲ್ ಸಹ ಒಬ್ಬರು. ಧರ್ಮೇಂದ್ರ ಅವರ ಮಗ, ಸನ್ನಿ ಡಿಯೋಲ್ ಅವರ ಸಹೋದರನಾಗಿರುವ ಬಾಬ್ಬಿ, ಯಶಸ್ವಿ ಸಿನಿಮಾಗಳನ್ನು ನೀಡಿ, ಜನಪ್ರಿಯ ನಟನಾಗಿದ್ದರು.
ಆದರೆ, ಅದೇನಾಯಿತೋ ಗೊತ್ತಿಲ್ಲ. ಕ್ರಮೇಣ ಅವರಿಗೆ ಯಶಸ್ಸು ಮರೀಚಿಕೆಯಾಯಿತು. ಇನ್ನೊಂದು ಕಡೆ ಚಿತ್ರಗಳಲ್ಲಿ ನಟಿಸುವುದೂ ಕಡಿಮೆಯಾಯಿತು. ಈ ಮಧ್ಯೆ ಕುಡಿತ ಹೆಚ್ಚಾಯಿತು. ಇದೆಲ್ಲದರಿಂದ ಬಾಬ್ಬಿ ಬಾಲಿವುಡ್ನಲ್ಲಿ ಮೂಲೆಗುಂಪಾಗಿ ಬಿಟ್ಟರು. ಇದೀಗ ಬಾಬ್ಬಿ ಮತ್ತೆ ಒಂದಿಷ್ಟು ಸಿನಿಮಾ ಮತ್ತು ವೆಬ್ ಸೀರೀಸ್ನಲ್ಲಿ ನಟಿಸುತ್ತಾ ಸಕ್ರಿಯರಾಗಿದ್ದಾರೆ.
ಇಷ್ಟಕ್ಕೆಲ್ಲಾ ಕಾರಣ, ಕುಡಿತ ಎನ್ನುತ್ತಾರೆ ಅವರು. 'ನನ್ನ ಕೆಲವು ಚಿತ್ರಗಳು ಸೋತವು. ಆಗ ನಾನು ಮನೆಯಲ್ಲೇ ಕೊರಗುತ್ತಾ ಕುಳಿತುಬಿಟ್ಟೆ. ಇಡೀ ಜಗತ್ತಿಗೆ ಶಾಪ ಹಾಕುತ್ತಾ, ಕಂಠಪೂರ್ತಿ ಕುಡಿಯುತ್ತಾ ಇದ್ದುಬಿಟ್ಟೆ. ಇದರಿಂದ ನನ್ನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವಾಯಿತು. ಆದರೆ, ನಾನು ಕುಡಿತ ಬಿಡಲಿಲ್ಲ. ಒಂದು ದಿನ ಮಕ್ಕಳ ಕಣ್ಣಲ್ಲಿ ನೋವು ನೋಡಿದೆ' ಎಂದು ನೆನಪಿಸಿಕೊಂಡಿದ್ದಾರೆ ಬಾಬ್ಬಿ.
'ಏನೂ ಕೆಲಸ ಮಾಡದೆ, ದಿನಪೂರ್ತಿ ಮನೆಯಲ್ಲಿ ಕೂತಿರುವುದರ ಬಗ್ಗೆ ಅವರೆಷ್ಟು ಚಿಂತೆಗೆ ಒಳಗಾಗಿದ್ದಾರೆ ಎಂಬುದು ಅವರ ಕಣ್ಣುಗಳಲ್ಲಿ ಗೊತ್ತಾಯಿತು. ಅದೇ ನೋವು ನನ್ನ ಅಮ್ಮ ಮತ್ತು ಹೆಂಡತಿಯಲ್ಲೂ ಕಂಡೆ. ಆಗ ನಾನ ಬದಲಾಗುವ ನಿರ್ಧಾರ ಮಾಡಿದೆ. ಹೀಗೆ ಕೊರಗುತ್ತಾ ಕೂತರೆ, ನನ್ನನ್ನು ಮೇಲೆತ್ತುವುದಕ್ಕೆ ಯಾರೂ ಬರುವುದಿಲ್ಲ. ನನಗೆ ನಾನೇ ಆಸರೆಯಾಗಬೇಕು ಮತ್ತು ನಾನು ಎದ್ದು ನಿಲ್ಲಬೇಕು ಎಂಬುದನ್ನು ಅರ್ಥ ಮಾಡಿಕೊಂಡೆ. ಅದರ ನಂತರ ಕಳೆದ ಎರಡ್ಮೂರು ವರ್ಷಗಳಲ್ಲಿ ಬಹಳ ಬ್ಯುಸಿಯಾಗಿದ್ದೇನೆ. ಒಂದಲ್ಲಾ ಒಂದು ಚಿತ್ರಗಳಲ್ಲಿ ಅಥವಾ ವೆಬ್ ಸೀರೀಸ್ಗಳಲ್ಲಿ ನಟಿಸುತ್ತಲೇ ಇದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.
ಸೋಲು, ನೋವು, ಹತಾಶೆ ... ಎಲ್ಲಾ ಹೀರೋಗಳಿಗೂ ಇದ್ದೇ ಇರುತ್ತದೆ ಎಂದಿರುವ ಅವರು, 'ಪ್ರತಿಯೊಬ್ಬ ನಟರೂ ಇದನ್ನು ಅನುಭವಿಸಿದ್ದಾರೆ. ಅದು ಶಾರೂಖ್ ಇರಲಿ, ಸಲ್ಮಾನ್ ಆಗಲೀ ... ಎಲ್ಲರೂ ಸಾಕಷ್ಟು ಹೋರಾಟ ಮಾಡಿ ಇಲ್ಲಿಯವರೆಗೂ ಬಂದಿದ್ದಾರೆ. ಏನೇ ಬಂದರೂ ಎದುರಿಸುವ ಗುಣ ಇರುವುದರಿಂದಲೇ ಅವರು ಇಷ್ಟು ದೂರ ಬರುವುದಕ್ಕೆ ಸಾಧ್ಯವಾಯಿತು. ಚಿತ್ರರಂಗದಲ್ಲಿ ಬ್ಯಾಕಿಂಗ್ ಎನ್ನುವುದು ಇರುವುದಿಲ್ಲ. ನಾನು ಸಿನಿಮಾ ಫ್ಯಾಮಿಲಿಯಿಂದ ಬಂದವನು, ನನ್ನ ಅಪ್ಪ ಮತ್ತು ಅಣ್ಣ ಕಲಾವಿದರು ಎಂದು ಮಾತ್ರಕ್ಕೆ ನನಗೆ ಎಲ್ಲವೂ ಸಲೀಸಲ್ಲ. ಅವರು ಅವಕಾಶ ಕೊಡಬಹುದು, ಜತೆಗೆ ನಿಂತು ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿದ್ದರೆ ನಾನು ಬರೀ ಯಶಸ್ವಿ ಚಿತ್ರಗಳನ್ನೇ ಕೊಡುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ.