ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ( Actor Darshan ) ಗೆ ಹೈಕೋರ್ಟ್ ಇಂದು (ಅ.30) ಮಧ್ಯಂತರ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ನೆಚ್ಚಿನ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅಸ್ಸಾಂನ ಕಾಮಾಕ್ಯದೇವಿ ದೇವಸ್ಥಾನದ ಫೋಟೋವನ್ನು ಶೇರ್ ಮಾಡಿಕೊಂಡಿರುವ ವಿಜಯಲಕ್ಷ್ಮೀ, ಧನ್ಯವಾದ (Thankful), ಕೃತಜ್ಞ (Greatful) ಹಾಗೂ ಆಶೀರ್ವಾದ (Blessed) ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಾಮಾಕ್ಯದೇವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು ದರ್ಶನ್ ಬಿಡುಗಡೆಗೆ ವಿಜಯಲಕ್ಷ್ಮೀ ಅವರು ಮಾಡುತ್ತಿರುವ ಪ್ರಯತ್ನ ಎಲ್ಲರಿಗೂತ ತಿಳಿದೇ ಇದೆ. ಕರ್ನಾಟಕದ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ವಿಜಯಲಕ್ಷ್ಮೀ ಕೆಲ ತಿಂಗಳ ಹಿಂದೆ ಅಸ್ಸಾಂ ಗುವಾಹಟಿಯಲ್ಲಿರುವ ಕಾಮಾಕ್ಯದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಂದಿದ್ದರು. ದರ್ಶನ್ಗಿರುವ ಅನಾರೋಗ್ಯದ ಬಗ್ಗೆ ತಿಳಿದಾಗ ಜಾಮೀನು ಪಡೆಯಲು ತುಂಬಾ ಕಷ್ಟಪಟ್ಟಿದ್ದರು. ಕೊನೆಗೂ ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ದೇವರಿಗೆ ಕೈಮುಗಿದಿದ್ದಾರೆ.
ಅಂದಹಾಗೆ ದರ್ಶನ್, ನಾನು ತೀವ್ರ ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಈ ಹಿನ್ನೆಲೆ ಮಧ್ಯಂತರ ಜಾಮೀನು ನೀಡಿ ಎಂದು ಅರ್ಜಿ ಸಲ್ಲಿಸಿದ್ದರು. ನಿನ್ನೆ (ಅ.29) ನಟ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರು ಮಂಡಿಸಿದ್ದರು. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿಯವರ ಏಕಸದಸ್ಯ ಪೀಠ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ಬೆಳಗ್ಗೆ 10.30ರ ಸುಮಾರಿಗೆ ತೀರ್ಪು ಪ್ರಕಟಿಸಿದ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇದರಿಂದ ದರ್ಶನ್ ಅಭಿಮಾನಿಗಳಿಗೆ ಬಹಳ ಖುಷಿಯಾಗಿದೆ. ಆದರೆ, ಬೇಸರ ಸಂಗತಿ ಏನೆಂದರೆ, ಇದು ಮಧ್ಯಂತರ ಜಾಮೀನು ಆಗಿದ್ದು, ಕೇವಲ 6 ವಾರಗಳು ಮಾತ್ರ ದರ್ಶನ್ ಜೈಲಿನಿಂದ ಹೊರಗಡೆ ಇರಲಿದ್ದಾರೆ. ಸಮಯ ಮುಗಿದ ಬಳಿಕ ಮತ್ತೆ ಜೈಲು ಸೇರಬಹುದು ಅಥವಾ ಜಾಮೀನು ಅವಧಿ ವಿಸ್ತರಣೆ ಕೂಡ ಆಗಬಹುದು.
ಈ ಆರು ವಾರಗಳಲ್ಲಿ ನಟ ದರ್ಶನ್ ತಮಗಿರುವ ಆರೋಗ್ಯ ಸಮಸ್ಯೆಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೆ, ಒಂದು ವಾರದಲ್ಲಿ ದರ್ಶನ್ ಚಿಕಿತ್ಸೆಯ ವಿವರವನ್ನು ಸಹ ಕೋರ್ಟ್ಗೆ ಸಲ್ಲಿಸಬೇಕಿದೆ. ಇನ್ನು ದರ್ಶನ್ ಪಾಸ್ಪೋರ್ಟ್ ಅನ್ನು ಕೂಡ ಕೋರ್ಟ್ ವಶಕ್ಕೆ ನೀಡಬೇಕಿದೆ. ಪಾಸ್ಪೋರ್ಟ್ ವಶಕ್ಕೆ ನೀಡಲು ಸರ್ಕಾರ ಪರ ವಕೀಲ ಪ್ರಸನ್ನ ಕುಮಾರ್ ಆಗ್ರಹಿಸಿದ್ದರು. ಇನ್ನು ದರ್ಶನ್ ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಲೈಂಗಿಕ ಜೀವನ ಹಾಳಾಗಲು ಈ ಕೆಟ್ಟ ಅಭ್ಯಾಸಗಳೇ ಕಾರಣ: ಬಿಡದಿದ್ರೆ ತೊಂದರೆ ತಪ್ಪಿದ್ದಲ್ಲ | Sex life
ದರ್ಶನ್ ಪರ ಸಿ.ವಿ ನಾಗೇಶ್ ಮಂಡಿಸಿದ ವಾದ
ಅರ್ಜಿದಾರರ ದೇಹದಲ್ಲಿ ಸಮರ್ಪಕವಾಗಿ ರಕ್ತಪರಿಚಲನೆ ಆಗುತ್ತಿಲ್ಲ, ಪಾದಗಳಲ್ಲಿ ನಂಬ್ ನೆಸ್ (ಮರಗಟ್ಟುವಿಕೆ) ಇದೆ. ಡಿಸ್ಕ್ ಸಮಸ್ಯೆ ಇದೆ. ಕಾಲಿನಲ್ಲಿ ನರದ ತೊಂದರೆ ಉಂಟಾಗಿದ್ದು, ಈಗಾಗಲೇ ಸ್ವಲ್ಪ ಮಟ್ಟಿಗೆ ಪಾದ ಸ್ಪರ್ಶ ಕಳೆದುಕೊಂಡಿದ್ದಾರೆ. ಹೀಗಿರುವಾಗ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾದರೆ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಎಡಮಾಡಿಕೊಡಬಹುದು. ವೈದ್ಯಕೀಯ ವರದಿಯಲ್ಲಿಯೂ ದರ್ಶನ್ ಅವರು ಪಾರ್ಶ್ವವಾಯು ತುತ್ತಾಗುವ ಸಾಧ್ಯತೆ ಅಧಿಕವಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂದಿದೆ. ಇವೆಲ್ಲವನ್ನೂ ಗಮನಿಸಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ವಕೀಲ ಪ್ರಸನ್ನ ಕುಮಾರ್ ವಾದ
ವೈದ್ಯಕೀಯ ವರದಿಯಲ್ಲಿ ಪಾರ್ಶ್ವವಾಯು ತುತ್ತಾಗುತ್ತಾರೆ ಎಂದಿಲ್ಲ, ತುತ್ತಾಗಬಹುದು ಎಂದು ವೈದ್ಯರು ಅಂದಾಜಿಸಿದ್ದಾರಷ್ಟೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ ನಿಮ್ಮ ಮಾತಿನ ಅರ್ಥವೇನು? ಅರ್ಜಿದಾರರು ಅನಾರೋಗ್ಯದ ಅಂತಿಮ ಹಂತಕ್ಕೆ ತಲುಪುವರೆಗೆ ಕಾಯಬೇಕು ಎನ್ನುವುದೇ ಎಂದು ಪ್ರಶ್ನಿಸಿತು. ತದನಂತರ ಸರ್ಕಾರಿ ಪರ ವಕೀಲರನ್ನು ಉದ್ದೇಶಿಸಿ ನೋಡಿ ಆರೋಗ್ಯ ಎಂಬುವುದು ಮಾನವನ ಮೂಲಭೂತ ಹಕ್ಕು. ವ್ಯಕ್ತಿ ಆರೋಪಿಯಾಗಿರಲಿ, ಅಪರಾಧಿಯಾಗಿರಲಿ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ. ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ಇದನ್ನು ಸುಪ್ರೀಂಕೋರ್ಟ್ ಸಹ ಹಲವು ವೇಳೆ ಪುನುರುಚ್ಚರಿಸಿದೆ ಎಂದಿತು.
ವಾದ-ಪತ್ರಿವಾದ ಆಲಿಸಿದ ನ್ಯಾಯಪೀಠ ಅರ್ಜಿಯ ತೀರ್ಪನ್ನು ಇಂದಿಗೆ ಪ್ರಕಟಿಸುವುದಾಗಿ ಹೇಳಿತ್ತು. ಇಂದು ಬೆಳಗ್ಗೆ ತೀರ್ಪು ಪ್ರಕಟಿಸಿದ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.
ನಟ ದರ್ಶನ್ ಬಾಳಲ್ಲಿ ದೀಪಾವಳಿ ಬೆಳಕು: 6 ವಾರ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್ | Actor Darshan