

ಬೆಂಗಳೂರು: ನಟ ವಿಜಯ ರಾಘವೇಂದ್ರ ಅವರ ಬದುಕಿನಲ್ಲಿ ಆ ಒಂದು ದುರಂತ ಘಟಿಸದೇ ಹೋಗಿದ್ದರೆ, ಇಂದು ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ, ಅವರ ಬಾಳಲ್ಲಿ ಅನಿರೀಕ್ಷಿತವಾಗಿ ಎದುರಾದ ಕೆಟ್ಟ ಗಳಿಗೆಯಲ್ಲಿ ತಮ್ಮ ಪ್ರೀತಿಯ ಮಡದಿ ಸ್ಪಂದನಾರನ್ನು ಕಳೆದುಕೊಂಡಿರುವ ವಿಜಯ್ ರಾಘವೇಂದ್ರ ದುಃಖ ಸಾಗರದಲ್ಲಿ ಮುಳುಗಿದ್ದಾರೆ.
ಸ್ಪಂದನಾ ಅವರು ಇಂದು ಬದುಕಿದ್ದರೆ ವಿಜಯ್ ರಾಘವೇಂದ್ರ ಅವರು 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರು. ಇಂದು ಸಂತೋಷ, ಸಂಭ್ರಮ ಮನೆ ಮಾಡಬೇಕಾಗಿದ್ದ ವಿಜಯ್ ಅವರ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಮಾತೇ ಹೊರಡದಂತಹ ಸ್ಥಿತಿಯಲ್ಲಿ ವಿಜಯ್ ಇದ್ದಾರೆ. ಮಡದಿಯ ಮರಣದ ನಂತರ ಯಾರ ಬಳಿಯೂ ವಿಜಯ್ ಹೆಚ್ಚು ಮಾತನಾಡುತ್ತಿಲ್ಲ.
ಪತ್ನಿ ಸ್ಪಂದನಾ ನೆನಪಲ್ಲೇ ದಿನ ದೂಡುತ್ತಿರುವ ವಿಜಯ್, ಮದುವೆಯ ವಾರ್ಷಿಕೋತ್ಸವದಂದು ಪತ್ನಿಯನ್ನು ನೆನೆದು ಕಣ್ಣೀರಾಕಿದ್ದಾರೆ. ಪ್ರೀತಿಯ ಮಡದಿಗಾಗಿ ಪ್ರೀತಿಯ ಸಾಲುಗಳನ್ನು ಒಳಗೊಂಡ ಪ್ರೇಮ ಪತ್ರವನ್ನು ಬರೆದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಚಿನ್ನ.. ಇಣುಕು ನೋಟ ಬೀರಿ ಹೋದೇ ಬದುಕಿನ ಅಂಗಳದಲಿ
ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ
ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬರೆತು ಜೀವಂತವಾದೆ
ಮುದ್ದಾದ ನಗುನಲ್ಲಿ ಇದ್ದ ನಗು ಪರ್ವತದಷ್ಟು..
ಮರೆಯದೇ... ತೊರೆಯದೇ... ಎದೆಗೊತ್ತಿ ಪ್ರೀತಿಸುವೆ, ಶೌರ್ಯದಲ್ಲಿ ನಾನು ಬಿಗಿದಪ್ಪುವಷ್ಟು
ಇಲ್ಲದ ಮಡದಿಗೆ ಪತ್ರ ಬರೆಯುವ ಮೂಲಕ ನಟ ವಿಜಯ್ ರಾಘವೇಂದ್ರ ಭಾವುಕರಾಗಿದ್ದಾರೆ. 16ನೇ ವಾರ್ಷಿಕೋತ್ಸವ. ಐ ಲವ್ ಯು ಚಿನ್ನ ಎಂದು ವಿಡಿಯೋಗೆ ಅಡಿಬರಹ ನೀಡಿದ್ದಾರೆ.
ಸ್ಪಂದನಾ ಅವರು ಆ.7ರಂದು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಅವರ ಅಂತ್ಯಕ್ರಿಯೆ ಆ.9ರಂದು ಈಡಿಗ ಸಂಪ್ರದಾಯದಂತೆ ಮಲ್ಲೇಶ್ವರಂ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿತು. (ದಿಗ್ವಿಜಯ ನ್ಯೂಸ್)