

ಬೆಂಗಳೂರು: ಪ್ರಧಾನಿ ಮೋದಿ ಅವರ ಇಂದಿನ ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಅವರನ್ನು ನೋಡಲು ರಸ್ತೆಯ ಪಕ್ಕದ ಬ್ಯಾರಿಕೇಡ್ಗಳ ಹಿಂದೆ ಜನ ಸಾಮಾನ್ಯರಂತೆ ನಿಂತು ಮೋದಿಯತ್ತ ಕೈಬೀಸುತ್ತಿರುವ ಬಿಜೆಪಿ ನಾಯಕರ ಫೋಟೋವನ್ನು ಶೇರ್ ಮಾಡಿಕೊಂಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿ ನಾಯಕರ ಕಾಲೆಳೆದಿದೆ.
ಎಕ್ಷ್ (ಟ್ವಿಟರ್) ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿ ನಾಯಕರದ್ದು ಎಂಥಾ ದುಸ್ಥಿತಿ. ರಾಜ್ಯ ಬಿಜೆಪಿಯ 'ದಂಡ'ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲ ಇಂದು ಬೀದಿ ಪಾಲಾಗಿದ್ದಾರೆ! ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿ ನಾಯಕರನ್ನು ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ? ಎಂದು ಕಾಂಗ್ರೆಸ್ ಕಿಚಾಯಿಸಿದೆ.
ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ! ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ! ಬಿಜೆಪಿ ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ ಎಂದು ಕಾಂಗ್ರೆಸ್ ಟ್ರೋಲ್ ಮಾಡಿದೆ.
ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಎಂಎಲ್ಸಿ ರಮೇಶ್ ಬಾಬು ಸಹ ಟ್ವೀಟ್ ಮಾಡಿದ್ದು, ಇಂಥ ದುರಂತವನ್ನು ನೀವು ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ನೋಡಲು ಸಾಧ್ಯ. ಮೋದಿ ಭೇಟಿ ವೇಳೆ ರಾಜ್ಯ ಬಿಜೆಪಿ ನಾಯಕರನ್ನೂ ಸಹ ನಾಯಿಗಿಂತ ಕಡೆಯಾಗಿ ನೋಡಲಾಗಿದೆ. ಬಿಜೆಪಿ, ಆರ್ಎಸ್ಎಸ್ನಲ್ಲಿ ಆತ್ಮಾಭಿಮಾನ ಸಂಸ್ಕೃತಿ ಕಳೆದು ಹೋಗಿದೆ. ಜೈ ಮೋದಿ ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ನಾಯಕರು ರಸ್ತೆ ಬದಿಯ ಬ್ಯಾರಿಕೇಡ್ ಹಿಂದೆ ನಿಂತು ಮೋದಿಯತ್ತ ಕೈ ಬೀಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಆರ್. ಅಶೋಕ್, ಮುನಿರತ್ನ, ಕೆ. ಗೋಪಾಲಯ್ಯ ಇದ್ದಾರೆ. ಇದೇ ಫೋಟೋವನ್ನು ಇದೀಗ ಕಾಂಗ್ರೆಸ್ ಟ್ರೋಲ್ ಮಾಡುತ್ತಿದೆ.
ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಆಗಸ್ಟ್ 23 ರಂದು ಭಾರತವು ಚಂದ್ರನ ಮೇಲೆ ಧ್ವಜವನ್ನು ಹಾರಿಸಿತು. ಇಂದಿನಿಂದ ಆ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಕರೆಯಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳವನ್ನು ಇನ್ನು ಮುಂದೆ ‘ಶಿವಶಕ್ತಿ’ ಎಂದು ಕರೆಯಲಾಗುವುದು ಮತ್ತು ಚಂದ್ರಯಾನ-2 ತನ್ನ ಹೆಜ್ಜೆಗುರುತುಗಳನ್ನು ಬಿಟ್ಟ ಚಂದ್ರನ ಮೇಲ್ಮೈಯಲ್ಲಿರುವ ಜಾಗವನ್ನು ‘ತಿರಂಗಾ’ ಎಂದು ಕರೆಯಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಘೋಷಣೆ ಮಾಡಿದರು.