ಇನ್ಮುಂದೆ ಆಗಸ್ಟ್​ 23 ರಾಷ್ಟ್ರೀಯ ಬಾಹ್ಯಾಕಾಶ ದಿನ: ಪ್ರಧಾನಿ ಮೋದಿ ಘೋಷಣೆ

Chandrayaan PM Modi
Published on

ಬೆಂಗಳೂರು: ಚಂದ್ರಯಾನ 3 ನೌಕೆ ಚಂದ್ರನ ಅಂಗಳದಲ್ಲಿ ಇಳಿದ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದರು.

ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಿ, ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ ಮಾತನಾಡಿದರು.

ಆಗಸ್ಟ್ 23 ರಂದು ಭಾರತವು ಚಂದ್ರನ ಮೇಲೆ ಧ್ವಜವನ್ನು ಹಾರಿಸಿತು. ಇಂದಿನಿಂದ ಆ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಕರೆಯಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ವಿಕ್ರಮ್​ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳವನ್ನು ಇನ್ನು ಮುಂದೆ 'ಶಿವಶಕ್ತಿ' ಎಂದು ಕರೆಯಲಾಗುವುದು ಮತ್ತು ಚಂದ್ರಯಾನ-2 ತನ್ನ ಹೆಜ್ಜೆಗುರುತುಗಳನ್ನು ಬಿಟ್ಟ ಚಂದ್ರನ ಮೇಲ್ಮೈಯಲ್ಲಿರುವ ಜಾಗವನ್ನು 'ತಿರಂಗಾ' ಎಂದು ಕರೆಯಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಘೋಷಣೆ ಮಾಡಿದರು.

ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಗ್ರೀಸ್​ನ ರಾಜಧಾನಿ ಅಥೇನ್ಸ್​ನಿಂದ ಹೊರಟು ಇಂದು ಬೆಳಗ್ಗೆ ಬೆಂಗಳೂರಿಗೆ ಬಂದಿಳಿದರು. ಮೋದಿ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ, ರಾಜ್ಯ ಪೋಲಿಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಪೋಲಿಸ್ ಆಯುಕ್ತ ದಯಾನಂದ್ ಆತ್ಮೀಯವಾಗಿ ಬರಮಾಡಿಕೊಂಡರು.

ಎಚ್​ಎಎಲ್​ ಮುಂಭಾಗ ನಿರ್ಮಿಸಿದ್ದ ವೇದಿಕೆಯನ್ನೇರಿ ಜನರತ್ತ ಪ್ರಧಾನಿ ಮೋದಿ ಕೈಬೀಸಿದರು. ಅಲ್ಲದೆ, ಜನರನ್ನು ಉದ್ದೇಶಿಸಿ ಕೆಲಕಾಲ ಮಾತನಾಡಿದರು. ನಂತರ ಇಸ್ರೋ ಕಡೆ ಹೊರಟ ಪ್ರಧಾನಿ ಮೋದಿಗೆ ದಾರಿಯುದ್ದಕ್ಕೂ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಸಾವಿರಾರು ಜನರು ಜೈಕಾರ ಕೂಗಿದರು.

ಜಾಲಹಳ್ಳಿ ಜಂಕ್ಷನ್​ಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜೈಕಾರ ಕೂಗಿ, ಹೂಮಳೆ ಸುರಿದು ಪ್ರಧಾನಿಗೆ ಅದ್ಧೂರಿ ಸ್ವಾಗತ ಕೋರಿದರು. ಇಸ್ರೋ ಕಚೇರಿಗೆ ಆಗಮಿಸುತ್ತಿದ್ದಂತೆ ಕಚೇರಿ ಒಳಗೆ ತೆರಳುವ ಮುನ್ನ ಅಲ್ಲಿ ನೆರೆದಿದ್ದ ಜನರತ್ತ ಕೈಬೀಸಿ, ನಂತರ ಇಸ್ರೋ ಕಚೇರಿಯ ಒಳಗೆ ಪ್ರಧಾನಿ ಮೋದಿ ತೆರಳಿದರು.

ಚಂದ್ರಯಾನದ ಹಾದಿ

* ಜುಲೈ 14 – ಉಡಾವಣೆ

* ಆಗಸ್ಟ್ 5 – ಚಂದ್ರನ ಕಕ್ಷೆಗೆ ಪ್ರವೇಶ

* ಆಗಸ್ಟ್ 17 – ಲ್ಯಾಂಡರ್ ಮಾಡ್ಯೂಲ್ ಬೇರ್ಪಡೆಯಾಗುವ ಪ್ರಕ್ರಿಯೆ ಯಶಸ್ವಿ

* ಆಗಸ್ಟ್ 6, 9, 14 ಮತ್ತು 16 – ಉಪಗ್ರಹದ ಕಕ್ಷೆ ಬದಲಾವಣೆ

* ಹಂತ-ಹಂತವಾಗಿ ಚಂದ್ರನ ಹತ್ತಿರಕ್ಕೆ ಬಂದ ನೌಕೆ

* ಆಗಸ್ಟ್ 23 – ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದ ಲ್ಯಾಂಡರ್

*1959ರಲ್ಲಿ ಜಾಗತಿಕವಾಗಿ ಮೊದಲ ಬಾರಿ ರಷ್ಯಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.

*1966ರಲ್ಲಿ ಅಮೆರಿಕ ಕೂಡ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿದೆ

*2013ರಲ್ಲಿ ಚೀನಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.

*600 ಕೋಟಿ ರೂ.: ಚಂದ್ರಯಾನ-3 ಕೈಗೊಳ್ಳಲು ಇಸ್ರೋಗೆ ತಗುಲಿದ ವೆಚ್ಚ

*40 ದಿನ: ಒಟ್ಟು ಅಂತರಿಕ್ಷದಲ್ಲಿ ಪ್ರಯಾಣಿಸಿದ ನೌಕೆ

*3.84 ಲಕ್ಷ: ಕಿ.ಮೀ ಕ್ರಮಿಸಿದ ದೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net