

ಹೈದರಾಬಾದ್: ಈಗಾಗಲೇ ಫೈಟರ್ ಎಂದು ಹೇಳಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ ಸಿನಿಮಾ ಇದೀಗ ಶೀರ್ಷಿಕೆ ಬದಲಾವಣೆ ಮಾಡಿಕೊಂಡಿದೆ. ಫೈಟರ್ ಬದಲಿಗೆ ಸಿಂಹ ಮತ್ತು ಹುಲಿಯ ಮಿಶ್ರತಳಿಯ ಹೆಸರೊಂದನ್ನು ಚಿತ್ರಕ್ಕಿಟ್ಟಿದ್ದಾರೆ. ಆ ಶೀರ್ಷಿಕೆಯೇ ಲೈಗರ್! ಇಂದು ಅದರ ಫಸ್ಟ್ ಲುಕ್ ಬಿಡುಗಡೆ ಆಗಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ನಟಿ ಜಾಕ್ಲೀನ್ ಫರ್ನಾಂಡೀಸ್
ಸೌತ್ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ನಟ ವಿಜಯ್ ದೇವರಕೊಂಡ, ಪ್ಯಾನ್ ಇಂಡಿಯಾ ಪರಿಕಲ್ಪನೆಯತ್ತ ಗಮನ ಹರಿಸಿದ್ದಾರೆ. ಈ ಹಿಂದಿನ ಡಿಯರ್ ಕಾಮ್ರೆಡ್ ಸಿನಿಮಾ ಸಹ ಹಲವು ಭಾಷೆಗಳಲ್ಲಿ ತೆರೆಕಂಡಿತ್ತಾದರೂ, ಅಷ್ಟಾಗಿ ಹೆಸರು ಮಾಡಲಿಲ್ಲ. ಇದೀಗ ಲೈಗರ್ ಸಿನಿಮಾ ಮೂಲಕ ಮತ್ತೆ ಬಹುಭಾಷಾ ಪ್ರಯತ್ನಕ್ಕಿಳಿದಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ ಜತಗೆ ನಿರ್ಮಾಣದಲ್ಲಿಯೂ ಕೈ ಜೋಡಿಸಿದ್ದಾರೆ. ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ಸಹ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಪ್ಯಾನ್ ಇಂಡಿಯಾ ಪರಿಕಲ್ಪನೆಯ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜನೆ ಸಿದ್ಧಪಡಿಸಿದ್ದಾರೆ.
ಆ್ಯಕ್ಷನ್ ಪ್ಯಾಕ್ ಸಿನಿಮಾ ಇದಾಗಿರಲಿದ್ದು, ವಿಜಯ್ ದೇವರಕೊಂಡ ಹಿಂದೆಂದೂ ಕಾಣಿಸದ ರೀತಿಯಲ್ಲಿ ಬಾಕ್ಸಿಂಗ್ ಕೋರ್ಟ್ನಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಲೈಗರ್ ಚಿತ್ರಕ್ಕೆ ಸಾಲಾ ಕ್ರಾಸ್ ಬ್ರೀಡ್ ಎಂಬ ಟ್ಯಾಗ್ಲೈನ್ ಸಹ ಇದೆ. ಹಿಂದಿ, ತೆಲುಗು, ತಮಿಳು, ಕನ್ನಡ ,ಮತ್ತು ಮಲಯಾಳಂನಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ರಮ್ಯಾ ಕೃಷ್ಣನ್ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ.