ನನ್ನ ಭವಿಷ್ಯದ ಮಕ್ಕಳ ತಾಯಿ ... ನಯನತಾರಾ ಜತೆಗೆ ಸಂಸಾರ ನಡೆಸುವ ಹಿಂಟ್ ಕೊಟ್ಟ ಶಿವನ್

Nayantara and Vignesh Sivan Final
Published on

ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್​ ಶಿವನ್ ಯಾವತ್ತೂ ತಮ್ಮ ಲವ್ ಏರ್ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಅವರಿಬ್ಬರ ಕುರಿತು ಸುದ್ದಿಗಳು ಬರುತ್ತಲೇ ಇವೆ. ಈಗ ಶಿವನ್ ಮೊದಲ ಬಾರಿಗೆ ನಯನತಾರಾ ಜತೆಗೆ ಸಂಸಾರ ನಡೆಸುವ ಕುರಿತಾಗಿ ಒಂದು ಹಿಂಟ್ ಕೊಟ್ಟಿದ್ದಾರೆ.

ಭಾನುವಾರ, ‘ವಿಶ್ವ ಅಮ್ಮಂದಿರ ದಿನ’ದ ಪ್ರಯುಕ್ತ ಶಿವನ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಾಯಿಗೆ ಶುಭ ಹಾರೈಸುವುದರ ಜತೆಗೆ, ತಮ್ಮ ಪ್ರೇಯಸಿ ನಯನತಾರಾಗೂ ವಿಚಿತ್ರ ರೀತಿಯಲ್ಲಿ ವಿಶ್ ಮಾಡಿದ್ದಾರೆ. ನಯನತಾರಾ, ಮಗು ಎತ್ತಿಕೊಂಡಿರುವ ಫೋಟೋ ಶೇರ್ ಮಾಡಿರುವ ಶಿವನ್, ‘ನನ್ನ ಭವಿಷ್ಯದ ಮಕ್ಕಳ ತಾಯಿಯ ಕೈಯಲ್ಲಿರುವ ಈ ಪುಟ್ಟ ಕಂದಮ್ಮನ ತಾಯಿಗೆ ಹ್ಯಾಪಿ ಮದರ್ಸ್ ಡೇ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಯನತಾರಾ ತಮ್ಮ ಭವಿಷ್ಯದ ಮಕ್ಕಳಿಗೆ ತಾಯಿಯಾಗಲಿದ್ದಾರೆ ಎಂದು ಸೂಕ್ಷ್ಮವಾಗಿ ಹೇಳಿಕೊಂಡಿದ್ದಾರೆ.

ಯಾವಾಗ ವಿಘ್ನೇಶ್​ ಶಿವನ್ ಇಂಥದ್ದೊಂದು ಪೋಸ್ಟ್ ಹಾಕಿದರೋ, ಆಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ನಯನತಾರಾ ಮತ್ತು ಶಿವನ್ ಅವರ ಮದುವೆಯ ಚರ್ಚೆ ಶುರುವಾಗಿದೆ. ಆದರೆ, ಎಷ್ಟೇ ಚರ್ಚೆಗಳು ನಡೆಯುತ್ತಿದ್ದರೂ, ಶಿವನ್ ಆಗಲೀ, ನಯನತಾರಾ ಆಗಲೀ ಈ ಕುರಿತು ಒಂದೇ ಒಂದು ಪ್ರತಿಕ್ರಿಯೆ ನೀಡುತ್ತಿಲ್ಲ. ದೂರದಲ್ಲಿದ್ದು ತಮ್ಮ ಮದುವೆ ಮತ್ತು ಸಂಸಾರದ ಬಗ್ಗೆ ನಡೆಯುತ್ತಿರುವ ಚರ್ಚೆಯ ಮಜಾ ತೆಗೆದುಕೊಳ್ಳುತ್ತಿದ್ದಾರೆ.

ಹಾಗಾದರೆ, ನಯನತಾರಾ ಮತ್ತು ಶಿವನ್ ಅವರ ಮದುವೆ ಯಾವಾಗ? ಈ ರಹಸ್ಯವನ್ನು ಅವರಿಬ್ಬರು ಯಾವಾಗ ಬಿಚ್ಚಿಡುತ್ತಾರೋ ದೇವರೇ ಬಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net