

‘1942 - ಎ ಲವ್‌ಸ್ಟೋರಿ’, ‘ಮಿಷನ್ ಕಾಶ್ಮೀರ್’, ‘ಶಿಕರ’ ಸೇರಿ ಕೆಲವು ಚಿತ್ರಗಳನ್ನು ನಿರ್ದೇಶಿರುವ ‘ಪಿಕೆ’, ‘ಮುನ್ನಭಾಯಿ ಎಂಬಿಬಿಎಸ್’, ‘ಸಂಜು’ ಸೇರಿ ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತಿ ವಿಧು ವಿನೋದ್ ಚೋಪ್ರಾಗೆ ಸಲ್ಲುತ್ತದೆ. ಇದೀಗ ಅವರು ‘12th ಫೇಲ್’ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಹೊರಟಿದ್ದಾರೆ.
ಇದು ಮಧ್ಯಪ್ರದೇಶ ಮೂಲದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಜೀವನಾಧಾರಿತ ಚಿತ್ರವಾಗಿದ್ದು, ವಿಕ್ರಾಂತ್ ಮಾಸ್ಸೆ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಮನೋಜ್ 12ನೇ ತರಗತಿಯಲ್ಲಿ ಫೇಲ್ ಆಗುತ್ತಾನೆ. ಶಾಲೆಯಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆತ, ಆಕೆಯ ಬಳಿ ಪ್ರೇಮನಿವೇದನೆ ಮಾಡಿಕೊಳ್ಳುತ್ತಾನೆ. ಆಕೆ ಒಪ್ಪಿಕೊಂಡು ಕೆಲ ಕಂಡೀಷನ್‌ಗಳನ್ನು ಹಾಕುತ್ತಾಳೆ. ಅದರಂತೆ ಓದಿನತ್ತ ಗಮನ ಹರಿಸುವ ಮನೋಜ್, ಬಡತನದ ನಡುವೆ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಾ, ರಸ್ತೆಬದಿಯಲ್ಲೇ ಮಲಗಿ, ಕಷ್ಟಪಟ್ಟು ಓದುತ್ತಾರೆ.
ಮೂರು ಬಾರಿ ಐಎಎಸ್ ಪರೀಕ್ಷೆಯಲ್ಲಿ ನಪಾಸಾದರೂ, ನಾಲ್ಕನೇ ಬಾರಿ 121ನೇ ರ್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗುತ್ತಾರೆ. ಅವರ ಜೀವನದ ಸುತ್ತ ‘12th ಫೇಲ್’ ಸಿನಿಮಾ ಸುತ್ತುತ್ತದೆ. ಚಿತ್ರ ಇದೇ ಅ. 27ರಂದು ಪ್ಯಾನ್ ಇಂಡಿಯಾ ರಿಲೀಸ್ ಆಗಲಿದ್ದು, ಕನ್ನಡದಲ್ಲಿ ಕೆಆರ್‌ಜಿ ಸ್ಟುಡಿಯೋಸ್ ಬಿಡುಗಡೆ ಮಾಡಲಿದೆ.
-ಏಜೆನ್ಸೀಸ್