

ಢಾಕಾ: ಹಾರಾಟದ ವೇಳೆ ವಿಮಾನದ ಒಳಗಡೆಯೇ ಪ್ರಯಾಣಿಕರು ಅಸಭ್ಯವಾಗಿ ವರ್ತಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿವೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರು ಪ್ರಯಾಣಿಕರು ಬಾಂಗ್ಲಾದೇಶದ ವಿಮಾನದ ಒಳಗಡೆ ಬಡಿದಾಡಿಕೊಂಡಿದ್ದಾರೆ.
ಬಿಟಂಕೋ ಬಿಸ್ವಾಸ್ ಎಂಬುವರು ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಸ್ವಾಸ್ ಟ್ವೀಟ್ ಪ್ರಕಾರ ವಿಮಾನವನ್ನು ಬಾಂಗ್ಲಾದೇಶದ ರಾಷ್ಟ್ರೀಯ ವಾಹಕ ಬೀಮನ್ ಬಾಂಗ್ಲದೇಶ ಆಪರೇಟ್ ಮಾಡುತ್ತಿದೆ. ಆದಾಗ್ಯೂ ಘಟನೆಯ ದಿನಾಂಕ ಮತ್ತು ವಿಮಾನದ ಮಾರ್ಗದ ಬಗ್ಗೆ ಮಾಹಿತಿ ತಿಳಿದಿಲ್ಲ.
ವಿಡಿಯೋದಲ್ಲಿ ಏನಿದೆ?
ಅಸಮಾಧಾನಗೊಂಡಿರುವ ಪ್ರಯಾಣಿಕರೊಬ್ಬರು ಶರ್ಟ್ ಇಲ್ಲದೆ ವಿಮಾನದ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ಇನ್ನೊಬ್ಬ ಪ್ರಯಾಣಿಕರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ಕಂಡುಬರುತ್ತದೆ. ಅಂಗಿ ಧರಿಸದ ಪ್ರಯಾಣಿಕನೂ ಅಳುತ್ತಿರುವಂತೆ ಕಾಣುತ್ತದೆ. ವಾಗ್ವಾದ ವೇಳೆ ವ್ಯಕ್ತಿ, ಸಹಪ್ರಯಾಣಿಕನ ಕಾಲರ್ ಅನ್ನು ಹಿಡಿದಿರುವುದನ್ನು ಸಹ ಕಾಣಬಹುದು. ಸಹ ಪ್ರಯಾಣಿಕನ ಮುಖವು ವಿಡಿಯೋದಲ್ಲಿ ಗೋಚರಿಸುವುದಿಲ್ಲ. ಕುಳಿತಿರುವ ಪ್ರಯಾಣಿಕ ಬಟ್ಟೆ ಧರಿಸದ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡುತ್ತಾನೆ. ಇದರಿಂದ ಕೋಪಗೊಂಡ ಅಂಗಿ ಹಾಕದ ವ್ಯಕ್ತಿ, ಸಹಪ್ರಯಾಣಿಕನ ಮೇಲೆ ದಾಳಿ ಮಾಡುತ್ತಾನೆ. ಈ ವೇಳೆ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ, ಅಂಗಿ ಧರಿಸಿದ ಪ್ರಯಾಣಿಕನನ್ನು ದೂರ ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಆದರೆ ಅದು ವ್ಯರ್ಥವಗುತ್ತದೆ. ಕೊನೆಗೆ ನಾಲ್ಕೈದು ಮಂದಿ ಸೇರಿ ಆತನನ್ನು ಹಿಡಿದಿಟ್ಟುಕೊಳ್ಳುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.
ಮತ್ತೊಬ್ಬ 'ಅಶಿಸ್ತಿನ ಪ್ರಯಾಣಿಕ'. ಈ ಬಾರಿ ಬಿಮನ್ ಬಾಂಗ್ಲಾದೇಶದ ಬೋಯಿಂಗ್ 777 ವಿಮಾನದಲ್ಲಿ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಮಾನದಲ್ಲಿ ಯಾವುದೇ ಗುಣಮಟ್ಟ ಇಲ್ಲ. ಶಿಕ್ಷಿತರು ಅಥವಾ ಅಶಿಕ್ಷಿತರು ಸಹ ಪ್ರಯಾಣಿಕರು ಮತ್ತು ಗಗನಸಖಿಯರ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)