

ರಾಮನಗರ: ತರಗತಿ ಮುಗೀತು ಇನ್ನೇನು ಮನೆಗೆ ಹೋಗಿ ಅಮ್ಮನ ಮಡಿಲು ಸೇರಬೇಕು ಎಂದು ಖುಷಿಯಿಂದ ಬರುತ್ತಿದ್ದ 5 ವರ್ಷದ ಬಾಲಕಿ ಶಾಲಾ ವಾಹನಕ್ಕೆ ಬಲಿಯಾದ ದುರ್ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿ ಸಂಭವಿಸಿದೆ.
ಸಿದ್ದೇನಹಳ್ಳಿಯ ಸ್ವಾಮಿ ಎಂಬುವರ ಪುತ್ರಿ ರಕ್ಷಿತಾ(5) ಮೃತೆ. ರಾಮನಗರ ತಾಲೂಕಿನ ಬಿಡದಿ ಬಳಿಯ ರಾಮನಹಳ್ಳಿ ಗೇಟ್ ಬಳಿ ಇರುವ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ರಕ್ಷಿತಾ ಯುಕೆಜಿ ಓದುತ್ತಿದ್ದಳು.
ಪ್ರತಿದಿನ ಶಾಲೆಗೆ ಶಾಲಾ ವಾಹನದಲ್ಲಿ ಹೋಗಿ ಬರುತ್ತಿದ್ದಳು. ಸೋಮವಾರ ಸಂಜೆ ಶಾಲೆಯಿಂದ ವಾಪಸಾಗುವಾಗ ಪಿಚ್ಚನಕೆರೆ ಬಳಿ ವಿದ್ಯಾರ್ಥಿಗಳನ್ನು ಇಳಿಸಿ ವಾಹನ ಮುಂದೆ ಹೊರಟಿತ್ತು. ಆದರೆ ಬಸ್ನ ಬಾಗಿಲು ಮುಚ್ಚಿರಲಿಲ್ಲ. ತಿರುವೊಂದರಲ್ಲಿ ಚಾಲಕ ಬ್ರೇಕ್ ಹಾಕಿದಾಗ ಸೀಟಿನಲ್ಲಿ ಕುಳಿತಿದ್ದ ರಕ್ಷಿತಾ ಮುಗ್ಗರಿಸಿ ಬಸ್ನಿಂದ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಬಸ್ನ ಹಿಂಬದಿ ಚಕ್ರ ರಕ್ಷಿತಾಳ ತಲೆ ಮೇಲೆ ಹರಿದಿದ್ದು, ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ವಾಹನ ಸಿಬ್ಬಂದಿ ಅಜಾಗರೂಕತೆ: ಬಾಲಕಿ ಮೃತಪಟ್ಟ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸುತ್ತಮುತ್ತಲ ಗ್ರಾಮಸ್ಥರು ಶಾಲಾ ವಾಹನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಗಳ ಶವದ ಎದುರು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಇದಕ್ಕೆ ಶಾಲಾ ಸಿಬ್ಬಂದಿಯ ಅಜಾಗರೂಕತೆಯೇ ಕಾರಣ. ಶಾಲೆ ಹಾಗೂ ಸಿಬ್ಬಂದಿ ವಿರುದ್ಧ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.