

ಚೆನ್ನೈ: ಇತ್ತೀಚಿನ ವರ್ಷಗಳಲ್ಲಿ ಮದುವೆಗೆ ಸಂಬಂಧಿಸಿದು ಸುದ್ದಿಗಳು ಆಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರ ಗಮನ ಸೆಳೆಯುವಲ್ಲಿ ಮಾತ್ರ ವಿಫಲವಾಗುತ್ತಿಲ್ಲ. ಇದೀಗ ತೆಂಗಿನಕಾಯಿ (Coconut) ವ್ಯಾಪಾರಿಯೊಬ್ಬರ ಮನೆಯಲ್ಲಿ ನಡೆದ ಮದುವೆ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಥೀಮ್ ಮದುವೆಯನ್ನು ಕಂಡು ಜನರು ತಮ್ಮದೇ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಪೊಲ್ಲಚ್ಚಿಯ ತೆಂಗಿನಕಾಯಿ ವ್ಯಾಪಾರಿಯ ಮನೆಯ ಮದುವೆಯ ಸಂಭ್ರಮಕ್ಕಿಂತ ಅಲ್ಲಿ ಸಿದ್ಧಗೊಂಡ ಊಟೋಪಚಾರದ ವ್ಯವಸ್ಥೆ ಎಲ್ಲರ ಗಮನ ಸೆಳೆಯುತ್ತಿದೆ. ತೆಂಗಿನಕಾಯಿಯ ಥೀಮ್ಅನ್ನು ಇಟ್ಟುಕೊಂಡು ಮದುವೆಮನೆಯನ್ನು ಸಿಂಗಾರಗೊಳಿಸಲಾಗಿದ್ದು, ಊಟಕ್ಕೆ ಕೂರುವ ಅತಿಥಿಗಳಿಗೆ ಒಡೆದು ಹೊಳಾದ ತೆಂಗಿನಕಾಯಿ ಮಾದರಿಯ ಒಂದು ಗೂಡಿನಲ್ಲಿ ಕೂರಿಸಿ ಅದೇ ರೀತಿಯ ಟೇಬಲ್ಅನ್ನು ವಿನ್ಯಾಸಗೊಳಿಸಲಾಗಿದೆ.
ಇತ್ತ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವಿಭಿನ್ನ ಹಾಗೂ ವಿಶೇಷ ಪ್ರಯತ್ನದ ವ್ಯವಸ್ಥೆಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದು, ವ್ಯಾಪಾರಿಯ ವಿಭಿನ್ನ ಆಲೋಚನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ಧಾರೆ. ಇದಲ್ಲದೆ ಊಟೋಪಚಾರ ಕೂಡ ಎಲ್ಲರ ಗಮನ ಸೆಳೆದಿದ್ದು, ಸದ್ಯ ಈ ಮದುವೆಗೆ ಸಂಬಂಧಿಸಿದ ಸುದ್ದಿಗಳು ಸಖತ್ ವೈರಲ್ ಆಗುತ್ತಿದೆ.