

ಮುಂಬೈ: ಆಟೋ ಚಾಲಕನೊಬ್ಬ ಮುಂಬೈನ ನಡುರಸ್ತೆಯಲ್ಲಿ ಬೈಕ್ ಸವಾರನಿಗೆ ಗುದ್ದಿ ಪರಾರಿಯಾಗಿರುವ ವಿಡಿಯೋ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಆಟೋ ಚಾಲಕನೊಬ್ಬ ಬೈಕ್ ಸವಾರನೊಂದಿಗೆ ಜಗಳವಾಡುತ್ತಾನೆ. ಜಗಳ ನಿಲ್ಲಿಸಿ, ಎರಡೂ ಗಾಡಿಗಳು ಮುಂದೆ ಹೋಗುತ್ತವೆ. ಹೀಗೆ ಹೋಗುವಾಗ ಬೈಕಿನ ಪಕ್ಕದಲ್ಲೇ ಚಲಿಸುವ ಆಟೋ ಕೆಲವೇ ಸೆಕೆಂಡುಗಳಲ್ಲಿ ಬೈಕಿಗೆ ಗುದ್ದೇ ಬಿಡುತ್ತದೆ. ಆಟೋ ಗುದ್ದಿದ ಏಟಿಗೆ, ಬೈಕ್ ಮತ್ತು ಸವಾರ ಎರಡೂ ರಸ್ತೆ ಮಧ್ಯೆ ಬೀಳುತ್ತಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಹರಿದಾಡಿದೆ.
ಈ ವಿಡಿಯೋ ಹರಿದಾಡಿದ ತಕ್ಷಣ ಮುಂಬೈ ಪೊಲೀಸರು ಎಚ್ಚೆತ್ತುಕೊಂಡಿದ್ದು, ಆಟೋ ಚಾಲಕನಿಗಾಗಿ ಬಲೆ ಬೀಸಿದ್ದಾರೆ. ಗುರುವಾರದಂದು ಆಟೋ ಚಾಲಕನನ್ನು ಪತ್ತೆ ಹಚ್ಚಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಮುಂಬೈನ ರಿಯಾಫಿಕ್ ನಗರದ ಸಲ್ಮಾನ್ ಸೈಯದ್ ಬಂಧಿತ ಆರೋಪಿ. ಈತ ಕಿಶೋರ್ ಹೆಸರಿನ ಬೈಕ್ ಸವಾರನೊಂದಿಗೆ ಜಗಳವಾಡಿದ್ದು, ಅದೇ ದ್ವೇಷದಿಂದ ಬೈಕ್ಗೆ ಗುದ್ದಿದ್ದಾಗಿ ಹೇಳಲಾಗಿದೆ. ಸಲ್ಮಾನ್ ವಿರುದ್ಧ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್)