ಪಿಎಫ್​ಐ ಖಾತೆಗೆ 100 ಕೋಟಿ ರೂಪಾಯಿ ಜಮೆ! ಇಡಿ ತನಿಖೆಯಿಂದ ಬಯಲಾಯ್ತು ಸಂಘಟನೆಯ ನಿಜ ಬಣ್ಣ

pfi
Published on

ತಿರುವನಂತಪುರಂ: ಕೇರಳ ಮೂಲದ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆಯ ಬ್ಯಾಂಕ್​ ಖಾತೆಗಳಿಗೆ ಕಳೆದ ಕೆಲ ವರ್ಷಗಳಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಹಣ ಜಮೆ ಆಗಿದೆ. ಜಾರಿ ನಿರ್ದೇಶನಾಲಯವು ಪಿಎಫ್​ಐ ವಿರುದ್ಧದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಈ ವಿಚಾರ ಹೊರಬಿದ್ದಿದೆ.

2014ರ ನಂತರ ಸಂಘಟನೆಯ ಹಣ ವರ್ಗಾವಣೆ, ಜಮೆ ವಹಿವಾಟು ಹೆಚ್ಚಾಗಿದೆ. ಬಹುಪಾಲು ಹಣ ನಗದು ರೂಪದಲ್ಲೇ ಜಮೆ ಆಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯಲ್ಲೂ ಪಿಎಫ್​ಐ ಭಾಗವಹಿಸಿತ್ತು. ಈ ಪ್ರತಿಭಟನೆಗೆ ಸಂಘಟನೆಗೆ ಹಣ ಪೂರೈಕೆ ಆಗಿರಬಹುದು ಎನ್ನಲಾಗಿದೆ.

ಫ್ರೆಬವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಗಲಭೆ ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಗಲಭೆಗಳಲ್ಲೂ ಪಿಎಫ್​ಐ ಪಾತ್ರವಿರುವ ಸಾಧ್ಯತೆಯಿದೆ. ಈ ಗಲಭೆಗಳಲ್ಲಿ ಪಿಎಫ್​ಐನ ರಾಜಕೀಯ ಘಟಕ, ಎಸ್​ಡಿಪಿಐ ಭಾಗಿಯಾಗಿತ್ತು ಎನ್ನುವುದಕ್ಕೆ ಕೆಲ ಸಾಕ್ಷ್ಯಾಧಾರಗಳೂ ಸಿಕ್ಕಿವೆ ಎನ್ನಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಿಎಫ್​ಐ ವಿದ್ಯಾರ್ಥಿ ಘಟಕದ ನಾಯಕ ಕೆ.ಎ.ರವೂಫ್​ ಷರೀಫ್​ರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ. ಕಸ್ಟಡಿಯ ಅವಧಿ ವಿಸ್ತರಣೆ ಕೋರಿ ನ್ಯಾಯಾಲಯಕ್ಕೆ ಅಫಿಡವಿಟ್​ ಸಲ್ಲಿಸಲಾಗಿದೆ. ಇಡಿ ಕೋರಿಕೆಯ ಮೇರೆಗೆ ಕಸ್ಟಡಿ ಅವಧಿಯನ್ನು ಮೂರು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net