ಮಮತಾ ಬ್ಯಾನರ್ಜಿ ಇನ್ವಿಟೇಷನ್​ ಡ್ರಾಮಾ! ಕರೆದರೂ ಬಂದಿಲ್ಲ ಎಂದು ಸಾಕ್ಷಿ​ ನೀಡಿದ ಬಿಜೆಪಿ!

invit
Published on

ಕೋಲ್ಕತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವಂತಹ ವ್ಯಕ್ತಿ. ಇದೀಗ ತಮ್ಮ ರಾಜ್ಯದ ವಿಶ್ವವಿದ್ಯಾನಿಲಯದ ಶತಮಾನೋತ್ಸವಕ್ಕೆ ತಮಗೇ ಆಹ್ವಾನ ನೀಡಿಲ್ಲ ಎನ್ನುವ ಮೂಲಕ ಸುದ್ದಿಗೆ ಬಂದಿದ್ದಾರೆ. ಆದರೆ ಆಹ್ವಾನ ಪತ್ರಿಕೆ ಕಳುಹಿಸಿಕೊಡಲಾಗಿತ್ತು ಎನ್ನುವುದಕ್ಕೆ ಸಾಕ್ಷಿ ಹುಡುಕಿರುವ ಬಿಜೆಪಿ, ಮಮತಾ ಅವರಿಗೆ ಕಳುಹಿಸಲಾಗಿದ್ದ ಆಹ್ವಾನ ಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ.

ರಾಜ್ಯದ ಪ್ರತಿಷ್ಠಿತ ವಿಶ್ವ ಭಾರತಿ ವಿಶ್ವವಿದ್ಯಾಲಯವು ಗುರುವಾರದಂದು ಶತಮಾನೋತ್ಸವ ಆಚರಿಸಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಾಗಿದ್ದು, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದಾರೆ. ರಾಜ್ಯಪಾಲರಾಗಿರುವ ಜಗದೀಪ್ ಧಂಕರ್ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ನನ್ನನ್ನೇ ಕರೆದಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.

ಇದು ವಿಶ್ವವಿದ್ಯಾಲಯದ ಕಾರ್ಯಕ್ರಮವಲ್ಲ. ಬಿಜೆಪಿಯ ಕಾರ್ಯಕ್ರಮ. ಈ ಶತಮಾನೋತ್ಸವದ ಕಾರ್ಯಕ್ರಮಕ್ಕಾಗಿ ನನಗೆ ಯಾವುದೇ ಆಹ್ವಾನ ಬಂದಿಲ್ಲ. ನನಗೆ ಯಾವುದೇ ಫೋನ್ ಕರೆ ಬಂದಿಲ್ಲ. ಯಾವುದೇ ಪತ್ರವೂ ನನ್ನ ಕಚೇರಿಗೆ ತಲುಪಿಲ್ಲ. ಬಿಜೆಪಿ ನನ್ನನ್ನು ಇಷ್ಟ ಪಡುವುದಿಲ್ಲ, ಅದಕ್ಕಾಗಿಯೇ ನನಗೆ ಆಹ್ವಾನ ಕಳುಹಿಸಿಲ್ಲ ಎಂದು ಮಮತಾ ಅವರು ಆರೋಪಿಸಿದ್ದಾರೆ.

ಮಮತಾ ಅವರು ಈ ಆರೋಪವನ್ನು ಮಾಡುತ್ತಿದ್ದಂತೆಯೇ ಬಿಜೆಪಿ ಎಚ್ಚೆತ್ತುಕೊಂಡಿದ್ದು, ಸಾಕ್ಷಿ ಸಹಿತ ಮಮತಾ ಅವರಿಗೆ ತಿರುಗೇಟು ನೀಡಿದ್ದಾರೆ. ವಿಶ್ವ ಭಾರತಿ ವಿಶ್ವವಿದ್ಯಾಲಯದಿಂದ ಮಮತಾ ಬ್ಯಾನರ್ಜಿ ಅವರಿಗೆ ಡಿಸೆಂಬರ್​ 4ರಂದೇ ಆಹ್ವಾನ ಪತ್ರಿಕೆಯನ್ನು ಕಳುಹಿಸಿಕೊಡಲಾಗಿದೆ. ಆ ಆಹ್ವಾನ ಪತ್ರಿಕೆಯಲ್ಲಿ ವಿವಿಯ ಉಪಕುಲಪತಿ ಬಿಡ್ಯುತ್ ಚಕ್ರವರ್ತಿ ಅವರ ಸಹಿಯೂ ಇದೆ. ಈ ಪತ್ರದ ಫೋಟೋವನ್ನು ಇದೀಗ ಬಿಜೆಪಿ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದೆ. "ವಿಶ್ವವಿದ್ಯಾಲಯವು ಮಮತಾ ಬ್ಯಾನರ್ಜಿ ಅವರಿಗೆ ಡಿ.4ರಂದೇ ಆಹ್ವಾನ ಪತ್ರ ಕಳುಹಿಸಿಕೊಟ್ಟಿದೆ. ಆದರೆ ಅವರಿಗೆ ಗುರುದೇವ್​ ಠಾಗೋರ್​ಗಿಂತ ಹೆಚ್ಚಾಗಿದ್ದು ರಾಜಕೀಯ. ಈವರೆಗೆ ಯಾವ ಮುಖ್ಯಮಂತ್ರಿಯೂ ವಿಶ್ವ ಭಾರತಿಗೆ ಈ ರೀತಿ ಅವಮಾನಿಸಿರಲಿಲ್ಲ" ಎಂದು ಬಿಜೆಪಿ ನಾಯಕ ಅಮಿತ್​ ಮಾಳ್ವಿಯಾ ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net