ಮುಂಬೈ: ಬಾಲಿವುಡ್ ನಟರು ಸೌತ್ ಸಿನಿಮಾಗಳಲ್ಲಿ ನಟಿಸುವುದು ಕಂಡುಬಂದಿದೆ. ಆದರೆ, ಸೌತ್ ಸಿನಿ ನಟರು ಬಾಲಿವುಡ್ಗೆ ಹಾರುವುದು ತುಂಬಾ ವಿರಳ. ಅದರಲ್ಲಿಯೂ, ಸೂಪರ್ ಸ್ಟಾರ್ ನಟರು ಬೇರೆ ಭಾಷೆಗಳಲ್ಲಿ ನಟಿಸುವುದು ಅಪರೂಪವೇ. ಒಂದು ವೇಳೆ ಯಾವುದಾದರು ಸಿನಿಮಾದಲ್ಲಿ ನಟರು ಕಾಣಿಸಿಕೊಂಡರು ಅದು ಅತಿಥಿ ಪಾತ್ರಗಳಲ್ಲಿ ಮಾತ್ರ. ಆದರೆ, 25 ವರ್ಷಗಳ ಬಳಿಕ ಸೂಪರ್ ಸ್ಟಾರ್ ನಟ ಫ್ಯಾಮೆಲಿ ಮ್ಯಾನ್, ವಿಕ್ಟರಿ ವೆಂಕಟೇಶ್ ಹಿಂದಿ ಸಿನಿಮಾದಲ್ಲಿ ನಟಿಸಲು ಹೊರಟಿದ್ದಾರೆ. ಹೌದು, ಬಾಲಿವುಡ್ ಭಾಯ್ಜಾನ್, ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆ ವೆಂಕಿ ತೆರೆಹಂಚಿಕೊಳ್ಳಲಿದ್ದಾರಂತೆ. ನಟ ಸಲ್ಮಾನ್ ಖಾನ್ ಅವರೊಂದಿಗೆ ಹಲವಾರು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, ಸಾಜಿದ್ ನಾದಿಯಾಡ್ವಾಲಾ ಅವರು ಈಗ ಮತ್ತೆ ಸಲ್ಮಾನ್ ಅವರೊಂದಿಗೆ ಒಂದು ಆಕ್ಷನ್ನ ಪ್ಲಸ್ ಹಾಸ್ಯ ಚಿತ್ರವನ್ನು ಮಾಡಲು ಸಿದ್ಧರಾಗಿದ್ದಾರೆ. ಈ ಬಾರಿ ಅವರು ದಕ್ಷಿಣದ ಸ್ಟಾರ್ ವಿಕ್ಟರಿ ವೆಂಕಟೇಶ್ ಅವರನ್ನು ನಟ ಸಲ್ಮಾನ್ ಅವರೊಂದಿಗೆ ತೆರೆಯನ್ನು ಹಂಚಿಕೊಳ್ಳಲು ವಿನಂತಿಸಿದ್ದಾರೆ ಎನ್ನಲಾಗಿದೆ. ಇನ್ನು, ಈ ಚಿತ್ರವು ಬಹು ಭಾಷೆಗಳಲ್ಲಿ ಅಂದರೆ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ ಎಂದು ವರದಿಯಾಗಿದೆ.