ಮೊಟ್ಟೆ ತಿಂದರೂ ವಿರಾಟ್ ಕೊಹ್ಲಿ ಸಸ್ಯಾಹಾರಿ! ನೆಟ್ಟಿಗರ ಅಚ್ಚರಿ

kohli eggs web
Published on

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾನಿನ್ನು ಸಂಪೂರ್ಣ ಸಸ್ಯಾಹಾರಿ ಎಂದು 2019ರಲ್ಲಿ ಪ್ರಕಟಿಸಿದ್ದರು. ಆದರೆ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜತೆಗಿನ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಕೊಹ್ಲಿ, ತಮ್ಮ ಡಯೆಟ್ ಬಗ್ಗೆ ವಿವರಿಸುತ್ತ ಪ್ರತಿದಿನವೂ ಕೆಲ ಮೊಟ್ಟೆಗಳನ್ನು ತಿನ್ನುತ್ತೇನೆ ಎಂದಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು, ಕೋಳಿ ಮೊಟ್ಟೆ ತಿನ್ನುವವರು ಸಸ್ಯಾಹಾರಿಗಳಾಗಲು ಹೇಗೆ ಸಾಧ್ಯ ಎಂದು ಅಚ್ಚರಿಯೊಂದಿಗೆ ಕೊಹ್ಲಿ ಕಾಲೆಳೆದಿದ್ದಾರೆ.

ಸಸ್ಯಾಹಾರಿಯಾಗಿರುವುದು ನಾನು ಜೀವನದಲ್ಲಿ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ. ನಾನು ಬಹಳ ಹಿಂದೆಯೇ ಯಾಕೆ ಈ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಅನಿಸುತ್ತಿದೆ ಎಂಬುದಾಗಿ ಕೊಹ್ಲಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ಈಗ ಮೊಟ್ಟೆ ತಿನ್ನುವುದಾಗಿ ಕೊಹ್ಲಿ ಹೇಳಿಕೊಂಡಿದ್ದು, ಈಗ ಅವರು ಸಸ್ಯಾಹಾರಿಯಾಗಿ ಉಳಿದಿಲ್ಲವೇ ಎಂದು ನೆಟ್ಟಿಗರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಕೊಹ್ಲಿ ತಮ್ಮ ಡಯೆಟ್ ಬಗ್ಗೆ ವಿವರಿಸುತ್ತ, ‘ಸಾಕಷ್ಟು ತರಕಾರಿಗಳು, ಕೆಲ ಮೊಟ್ಟೆ, 2 ಕಪ್ ಕಾಫಿ, ದಾಲ್, ಕ್ವಿನಾವೊ, ಸಾಕಷ್ಟು ಸ್ಪಿನಿಚ್ ಸೊಪ್ಪು ತಿನ್ನುತ್ತೇನೆ. ಹಾಗೆಯೇ ದೋಸೆಗಳನ್ನು ಇಷ್ಟಪಡುತ್ತೇನೆ. ಆದರೆ ಎಲ್ಲವನ್ನೂ ಸಾಕಷ್ಟು ನಿಯಂತ್ರಣದಲ್ಲಿ ತಿನ್ನುತ್ತೇನೆ’ ಎಂದು ಹೇಳಿದ್ದಾರೆ. ಶಾಕಾಹಾರಿಯ ಡಯೆಟ್‌ನಲ್ಲಿ ಮೊಟ್ಟೆ ಹೇಗೆ ಸೇರಿಕೊಂಡಿತು ಎಂದು ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಕೊಹ್ಲಿ ಇದೀಗ ಮತ್ತೆ ಮಾಂಸಾಹಾರಿಯಾಗಿರಬಹುದು ಎಂದೂ ಕೆಲವರು ವಾದಿಸಿದ್ದಾರೆ.

ಉತ್ತಮ ಫಿಟ್ನೆಸ್ ಸಲುವಾಗಿ ಸಸ್ಯಾಹಾರಿಯಾಗಿರುವುದಾಗಿಯೂ ಕೊಹ್ಲಿ ಈ ಹಿಂದೆ ಹೇಳಿಕೊಂಡಿದ್ದರು. ಇದೀಗ ಅದೇ ಫಿಟ್ನೆಸ್‌ಗಾಗಿ ಅವರು ಮೊಟ್ಟೆಯನ್ನೂ ತಿನ್ನುತ್ತಿದ್ದಾರೆ. ಆದರೆ ಈ ವೇಳೆ ಶಾಕಾಹಾರವೇ, ಅಲ್ಲವೇ ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದೂ ವಾದಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net